
BATKAL : ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮುರುಡೇಶ್ವರ ಬೀಚ್ನಲ್ಲಿ ಸಮುದ್ರದ ಭಾರೀ ಅಲೆಗಳಿಗೆ ಎಂಟು ವರ್ಷದ ಬಾಲಕನೊಬ್ಬ ಬಲಿಯಾದ ದುರ್ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತ ಬಾಲಕನನ್ನು ಬೆಂಗಳೂರಿನ ಬಿದರಹಳ್ಳಿ ನಿವಾಸಿ ಕೆ. ರವಿ ರೆಡ್ಡಿ ಅವರ ಪುತ್ರ ಕೃತಿಕ್ (8) ಎಂದು ಗುರುತಿ ಸಲಾಗಿದೆ. ರವಿ ರೆಡ್ಡಿ ತಮ್ಮ ಕುಟುಂಬದೊಂದಿಗೆ ನೆನ್ನೆ ರಾತ್ರಿ ಮುರುಡೇಶ್ವರಕ್ಕೆ ಭೇಟಿ ನೀಡಿದ್ದು, ಬೆಳಿಗ್ಗೆ ಅವರು ದೇವಾಲಯದ ಎಡಬದಿಯ ಸಮುದ್ರ ತೀರಕ್ಕೆ ಹೋಗಿದ್ದರು.
ಮಕ್ಕಳು ಬೀಚ್ನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಅಕಸ್ಮಾತ್ ಭಾರೀ ಅಲೆ ಒಂದು ಅಪ್ಪಳಿಸಿ, ಕೃತಿಕ್ ಮತ್ತು ವಸಂತಾ ಕೆ. (27) ಎಂಬುವವರು ಸಮುದ್ರಕ್ಕೆ ಕೊಚ್ಚಿ ಹೋಗಿದ್ದಾರೆ. ವಸಂತಾ ಅವರು ಅಲೆಯಲ್ಲಿ ಸಿಲುಕಿ ಗಂಭೀರ ವಾಗಿ ಅಸ್ವಸ್ಥಗೊಂಡಿ ದ್ದು, ಅವರನ್ನು ತಕ್ಷಣವೇ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಬಾಲಕ ಕೃತಿಕ್ ಅವರು ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಈ ಘಟನೆಯ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಸಾರ್ವಜನಿಕರು ಬೀಚ್ ಪ್ರದೇಶದಲ್ಲಿ ಆಟವಾಡುವಾಗ ಸೂಕ್ತ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.




