Bengaluru : ವಿಚ್ಛೇದಿತ ಮಹಿಳೆಗೆ ಬಾಳು ಕೊಡುವುದಾಗಿ ಮಗು ಮಾಡಿ, 36 ಲಕ್ಷ ರೂ. ತೆಗೆದುಕೊಂಡು ವ್ಯಕ್ತಿ ಪರಾರಿ!

Bengaluru ಬನಶಂಕರಿ ವ್ಯಾಪ್ತಿಯಲ್ಲಿ ವಿಚ್ಛೇದಿತ ಮಹಿಳೆಗೆ ಮದುವೆಯ ಭರವಸೆ ನೀಡಿ ಆಕೆಯೊಂದಿಗೆ ಸಂಸಾರ ನಡೆಸಿ, ಮಗು ಜನಿಸಿದ ಬಳಿಕ ಚಿನ್ನಾಭರಣ ಹಾಗೂ ನಗದು ಸೇರಿ ಸುಮಾರು 36 ಲಕ್ಷ ರೂಪಾಯಿ ಪಡೆದು ವ್ಯಕ್ತಿ ಪರಾರಿಯಾದ ಆರೋಪ ಕೇಳಿಬಂದಿದೆ. ಇನ್ನು ಈ ಸಂಬಂಧ ಬನಶಂಕರಿಯ ಮೋಹನ್ ರಾಜ್ ಎಂಬಾತನ ವಿರುದ್ಧ ಮಹಿಳೆ ಗಂಭೀರ ಆರೋಪ ಮಾಡಿದ್ದು, ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದಿಗೂ ಪತ್ತೆಯಾಗಿಲ್ಲ
ಸಂತ್ರಸ್ತೆಯ ಹೇಳಿಕೆ ಪ್ರಕಾರ, ಕಳೆದ 10 ವರ್ಷಗಳಿಂದ ಮೋಹನ್ ರಾಜ್ ಪರಿಚಯವಿದ್ದು, 2022ರಲ್ಲಿ ಇಬ್ಬರು ಮದುವೆ ಆಗಿದ್ದರು. 2023ರ ಫೆಬ್ರವರಿಯಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿದೆ. ಆದರೆ 2025ರಲ್ಲಿ ಏಕಾಏಕಿ ಮನೆ ಬಿಟ್ಟು ಹೋದ ಮೋಹನ್ ರಾಜ್ ಇಂದಿಗೂ ಪತ್ತೆಯಾಗಿಲ್ಲ ಎಂದು ಮಹಿಳೆ ದೂರಿದ್ದಾರೆ.

ಹೊಸ ಮನೆ ಕಟ್ಟೋಣ ಎಂದು ನಂಬಿಸಿ ಹಣ ಪಡೆದು ವಂಚನೆ
ಮದುವೆಯ ಬಳಿಕ ಹೊಸ ಮನೆ ಕಟ್ಟೋಣ, ಹೊಸ ಜೀವನ ಆರಂಭಿಸೋಣ ಎಂದು ನಂಬಿಸಿ ಮಹಿಳೆಯಿಂದ ಹಣ ಹಾಗೂ ಚಿನ್ನಾಭರಣ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಚಿನ್ನಾಭರಣ ಅಡವಿಟ್ಟು ಹಾಗೂ ಸಾಲ ಪಡೆದು ಒಟ್ಟು 36 ಲಕ್ಷ ರೂ. ನೀಡಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈಗ ಹಣ ಕೇಳಿದರೆ ‘ನೀನು ಯಾರು ಅಂತಲೇ ಗೊತ್ತಿಲ್ಲ’ ಎಂದು ಹೇಳುತ್ತಾನೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ : ‘The Raja Saab’ ಅಬ್ಬರ – ಮೊದಲ ದಿನದ ಗಳಿಕೆ ಎಷ್ಟು?
ನ್ಯಾಯ ಕೇಳಲು ಹೋದಾಗ ಹಲ್ಲೆ
ಇನ್ನು ನ್ಯಾಯಕ್ಕಾಗಿ ಆರೋಪಿಯ ಮನೆ ಬಳಿ ತೆರಳಿದಾಗ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಈವರೆಗೆ ನಾಲ್ಕು ಬಾರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ನ್ಯಾಯ ಸಿಗಲಿಲ್ಲ. ಮತ್ತೊಮ್ಮೆ ದೂರು ನೀಡಿದರೆ “ನಿನ್ನನ್ನೇ ಒಳಗೆ ಹಾಕ್ತೀವಿ” ಎಂದು ಪೊಲೀಸರು ಬೆದರಿಸಿದ್ದಾರೆ ಎಂದು ಮಹಿಳೆ ಗಂಭೀರ ಆರೋಪ ಮಾಡಿದ್ದಾರೆ.

ಪೊಲೀಸರೊಂದಿಗೆ ಆರೋಪಿಗೆ ನಂಟಿದೆ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಕೊನೆಗೆ ಇದೀಗ ಆರೋಪಿ ವಿರುದ್ಧ FIR ದಾಖಲಾಗಿದೆ.
ಪತಿಯಿಂದ ವಿಚ್ಛೇದನ
ಸಂತ್ರಸ್ತೆ 2021ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದು, ಮೊದಲ ಪತಿಗೆ ಆರೋಗ್ಯ ಸಮಸ್ಯೆ ಇದ್ದ ಕಾರಣ ವಿಚ್ಛೇದನ ಪಡೆದಿರುವುದಾಗಿ ತಿಳಿಸಿದ್ದಾರೆ. ಈ ವಿಚಾರ ಸಂಪೂರ್ಣ ವಾಗಿ ತಿಳಿದಿದ್ದರೂ ಮೋಹನ್ ರಾಜ್ ಮದುವೆಯಾಗಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ.

ಯುವತಿಯರೊಂದಿಗೆ ಅಕ್ರಮ ಸಂಬಂಧ, ಅಶ್ಲೀಲ ಮೆಸೇಜ್
ಮೋಹನ್ ರಾಜ್ ಬೇರೆ ಬೇರೆ ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾನೆ, ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದಾನೆ. ಮೊಬೈಲ್ನಲ್ಲಿ ಫೋಟೋಗಳನ್ನೂ ನೋಡಿದ್ದೇನೆ ಎಂದು ಮಹಿಳೆ ಆರೋಪಿಸಿದ್ದಾರೆ.
ಮದುವೆಗೆ ಮುಂಚೆಯೂ ನಂತರವೂ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ತನ್ನ ಹೆಣ್ಣು ಮಗು ಹಾಗೂ ಮೊದಲ ಪತಿಯ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾನೆ ಎಂದು ದೂರಿದ್ದಾರೆ. ಸದ್ಯ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ನೋಡಿ : ಬೆಂಗಳೂರಲ್ಲಿ ಹೆಚ್ಚಾದ್ರು ಬಾಂಗ್ಲಾ ನಿವಾಸಿಗಳು ಕೇಂದ್ರ ಸಚಿವ V SOMANNA ಸ್ಫೋಟಕ ಹೇಳಿಕೆ




