
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಬೀದಿ ನಾಯಿಗಳ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ. ನಗರಸಭೆಗೆ ನಾಯಿಗಳ ಕಾಟವನ್ನು ತಪ್ಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ರು, ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲವಂತೆ. ಇದೇ ಕಾರಣಕ್ಕೆ ಇಂದು ಸಾಮಾಜಿಕ ಹೋರಾಟಗಾರರಾದ ಬಿ.ಎನ್.ರಾಘವೇಂದ್ರ ನೇತೃತ್ವದಲ್ಲಿ ಹೋರಾಟಗಾರರು ಪಿಪಿ ವೃತ್ತದಿಂದ ತಮಟೆ ಹೊಡೆದುಕೊಂಡು ಪಾದಯಾತ್ರೆ ಮಾಡುವ ಮೂಲಕ ನಗರಸಭೆ ತಲುಪಿ ಪೌರಾಯುಕ್ತರಿಗೆ ಮನವಿ ಪತ್ರವನ್ನು ನೀಡಿದರು.

ಹೌದು.. ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿರುವುದರಿಂದ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿ ಸಮಾಜ ಹೋರಾಟಗಾರಾದ ಬಿ.ಎನ್. ರಾಘವೇಂದ್ರರಿಂದ ಪ್ರತಿಭಟನೆ ನಡೆಸಿ, ಆಗ್ರಹಿಸಿದ್ರು. ಅರಸೀಕೆರೆ ನಗರದ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಶಾಲಾ ಮಕ್ಕಳ ಮೇಲೆ ಹಾಗೂ ಹಿರಿಯ ನಾಗರಿಕರ ಮೇಲೆ ಮತ್ತು ಸಾರ್ವಜನಿಕರ ಮೇಲೆ ಹಾಗೂ ಜಾನುವಾರುಗಳ ಮೇಲೆ ಎರಗುತ್ತಿವೆ. ಅದೆಷ್ಟೋ ಜನರು ಭಯದಿಂದಲೇ ನಗರದಲ್ಲಿ ಸಂಚರಿಸುವಂತಾಗಿದೆ.
ಇದೇ ವೇಳೆ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಮಾತನಾಡಿ, ಅರಸೀಕೆರೆಯಲ್ಲಿ ದಿನೇ ದಿನೇ ಬೀದಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ. , ಸಾವು ನೋವುಗಳ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಬೀದಿ ನಾಯಿಗಳ ಕಾಟವನ್ನು ತಪ್ಪಿಸುವ ಕೆಲಸ ಮಾಡಿ, ಸಾರ್ವಜನಿಕರ ಜೀವ ಉಳಿಸಬೇಕಾಗಿದೆ. ಕೂಡಲೇ ನಗರ ಎಲ್ಲಾ ನಾಯಿಗಳಿಗೆ ಸಂತಾನ ಹರಣ ಮಾಡಿಸಬೇಕು ಎಂದರು.

ಇನ್ನು ಇದೇ ಸಂದರ್ಭದಲ್ಲಿ ಮನವಿ ಪತ್ರವನ್ನು ಸ್ವೀಕರಿಸಿ ನಗರಸಭೆ ಪೌರಾಯುಕ್ತರು ಮಾತನಾಡಿ, ಒಂದು ತಿಂಗಳು ಮುಂಚೆ ಹಲವಾರು ನಾಯಿಗಳನ್ನು ನಾವು ಸಂತಾನ ಹರಣ ಮಾಡಿದ್ದೇವೆ. ಇನ್ನು ಹಲವಾರು ನಾಯಿಗಳಿದ್ದು, ಮುಂದಿನ ದಿನಗಳಲ್ಲಿ ಆ ನಾಯಿಗಳಿಗೂ ಕೂಡ ಸಂತಾನ ಹರಣ ಮಾಡಿ, ಸಾರ್ವಜನಿಕರಿಗೆ ಜಾನುವಾರುಗಳಿಗೆ ಯಾವುದೇ ತರಹದ ತೊಂದರೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದರು.




