Koppal : ದೇವಾಲಯದ ಬಳಿ ನವಜಾತ ಹೆಣ್ಣು ಮಗುವನ್ನು ಅಮಾನವೀಯವಾಗಿ ಎಸೆದು ಹೋಗಲಾಗಿದೆ. ಮುಳ್ಳಿನ ಪೊದೆಯಲ್ಲಿ ಸಿಕ್ಕಿಬಿದ್ದ ಮಗುವನ್ನು ಹೋಮ್ ಗಾರ್ಡ್ ರಕ್ಷಿಸಿದ್ದಾರೆ.

Koppal : ಸಮಾಜ ಎಷ್ಟೇ ಮುಂದುವರೆದರೂ, ಹೆಣ್ಣು ಮಗು ಬೇಡ ಎನ್ನುವ ಮನಸ್ಥಿತಿ ಸಂಪೂರ್ಣವಾಗಿ ಬದಲಾಗಿಲ್ಲ ಎಂಬುದಕ್ಕೆ ಉದಾಹರಣೆ ಕೊಪ್ಪಳ ತಾಲ್ಲೂಕಿನ ಐತಿಹಾಸಿಕ ಹುಲಗೆಮ್ಮ ದೇವಸ್ಥಾನದಲ್ಲಿ ಬೆಳಕಿಗೆ ಬಂದಿದೆ.
ದೇವಾಲಯದ ಪಕ್ಕದ ಪೊದೆಯಲ್ಲಿ ನವಜಾತ ಹೆಣ್ಣು ಮಗು ಪತ್ತೆ
ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡುವ ಹುಲಗೆಮ್ಮ ದೇವಸ್ಥಾನದ ಪಕ್ಕದ ಮುಳ್ಳಿನ ಪೊದೆಯಲ್ಲಿ ನವಜಾತ ಹೆಣ್ಣು ಶಿಶು ಪತ್ತೆಯಾಗಿದೆ. ಈ ಮಗು ಜನಿಸಿ ಒಂದು ದಿನ ಆಗಿರದಿರಬಹುದು ಎಂದು ಅಂದಾಜಿಸಲಾಗಿದೆ.
ಹೋಮ್ಗಾರ್ಡ್ಗಳ ಸಮಯಪ್ರಜ್ಞೆಯಿಂದ ಮಗು ರಕ್ಷಣೆ
ಮಗು ಅಳುತ್ತಿರುವ ಶಬ್ದ ಕೇಳಿ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಮ್ಗಾರ್ಡ್ ಗಳು ಸ್ಥಳಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ. ತಕ್ಷಣ ಮಗುವನ್ನು ಸ್ಥಳೀಯ ಹುಲಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಝೀರೋ ಟ್ರಾಫಿಕ್ನಲ್ಲಿ ನವಜಾತ ಶಿಶು ರವಾನೆ
ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು
ಮಗುವಿಗೆ ಸ್ವಲ್ಪ ಗಾಯಗಳಾಗಿದ್ದು, ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಸುಮಾರು 2 ಕೆಜಿ 400 ಗ್ರಾಂ ತೂಕವಿದೆ.
ಹುಲಗೆಮ್ಮ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಮ್ಗಾರ್ಡ್ಗಳಾದ ಶಿವಕುಮಾರ್ ಹಾಗೂ ಮಾರುತಿ ಅವರ ಸಮಯ ಪ್ರಜ್ಞೆಯಿಂದ ನವಜಾತ ಶಿಶುವಿನ ಜೀವ ಉಳಿದಿದೆ.
ಮಕ್ಕಳ ರಕ್ಷಣಾ ಘಟಕದಿಂದ ತನಿಖೆ ಆರಂಭ
ಮಾಹಿತಿ ತಿಳಿದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಮಗುವಿನ ಪೋಷಕರು ಯಾರು ಎಂಬುದರ ಕುರಿತು ತನಿಖೆ ಮುಂದುವರಿದಿದ್ದು, ಮದುವೆಗೆ ಮುನ್ನ ಗರ್ಭಿಣಿಯಾದ ಕಾರಣ ಮಗುವನ್ನು ತ್ಯಜಿಸಿರುವ ಶಂಕೆ ವ್ಯಕ್ತವಾಗಿದೆ.
ಒಂದು ವೇಳೆ ಮಗುವಿನ ಪೋಷಕರು ಪತ್ತೆಯಾಗದಿದ್ದಲ್ಲಿ, ಕಾನೂನು ಪ್ರಕ್ರಿಯೆ ಅನುಸರಿಸಿ ಮಗುವನ್ನು ದತ್ತು ನೀಡುವ ಕ್ರಮ ಕೈಗೊಳ್ಳಲಾಗುವುದು ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.
MUST WATCH : ZERO TRAFFIC ನಲ್ಲಿ ನವಜಾತ ಶಿಶು ರವಾನೆ




