
ಕಾಂತಾರ ಚಾಪ್ಟರ್–1′ ಟ್ರೈಲರ್ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಹೋಂಬಾಳೆ ಫಿಲ್ಮ್ಸ್ ಈ ಬಹುನಿರೀಕ್ಷಿತ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಹಾಗೂ ಸಮಯವನ್ನು ಅಧಿಕೃತವಾಗಿ ಘೋಷಿಸಿದೆ. ಸೆಪ್ಟೆಂಬರ್ 22, ಸೋಮವಾರ ಮಧ್ಯಾಹ್ನ 12:45 ಕ್ಕೆ ಟ್ರೈಲರ್ ಬಿಡುಗಡೆಯಾಗಲಿದೆ. ಟ್ರೈಲರ್ ಲಾಂಚ್ ಈವೆಂಟ್ನ್ನು ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಅದ್ದೂರಿಯಾಗಿ ಆಯೋಜಿಸಬಹುದು ಎಂಬ ನಿರೀಕ್ಷೆಯಿದೆ. ಇದು ಕನ್ನಡ ಚಲನಚಿತ್ರರಂಗದಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.
ಇನ್ನು ಚಿತ್ರರಸಿಕರ ಗಮನ ಈ ಸಿನಿಮಾದ ಮೇಲೆ ನೆಟ್ಟಿದೆ. ಬಹುಭಾಷಾ ಟ್ರೈಲರ್ ಬಿಡುಗಡೆಗಾಗಿ ಬೃಹತ್ ಪ್ರಮೋಷನ್ ಯೋಜನೆಯು ಕೈಗೆತ್ತಿಕೊಳ್ಳಲಾಗಿದೆ. ಹಿಂದಿ ಭಾಷೆಗೆ ನಟ ಹೃತಿಕ್ ರೋಷನ್, ತೆಲುಗಿಗೆ ಪ್ರಭಾಸ್, ತಮಿಳಿಗೆ ಶಿವಕಾರ್ತಿಕೇಯನ್ ಹಾಗೂ ಮಲಯಾಳಂಗೆ ಪೃಥ್ವಿರಾಜ್ ಸುಕುಮಾರನ್ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ. ಇವರೆಲ್ಲರೂ ತಮ್ಮ-ತಮ್ಮ ಭಾಷೆಗಳಲ್ಲಿ ಟ್ರೈಲರ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಿದ್ದಾರೆ.
ವಿದೇಶಗಳಲ್ಲಿ ಈಗಾಗಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸೆಪ್ಟೆಂಬರ್ 25ಕ್ಕೆ ಭಾರತದಲ್ಲಿ ಕೂಡ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗುವ ನಿರೀಕ್ಷೆಯಿದೆ. 3 ವರ್ಷಗಳ ಬಳಿಕ ‘ಕಾಂತಾರ’ ಸಿನಿಮಾ ಪ್ರೀಕ್ವೆಲ್ ಬರ್ತಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ.





