
ಅಕ್ಟೋಬರ್ 1ರಿಂದ ರೈಲು ಟಿಕೆಟ್ ಬುಕ್ಕಿಂಗ್ನಲ್ಲಿ ಹೊಸ ನಿಯಮ ಜಾರಿಯಾಗಲಿದೆ. ಆನ್ಲೈನ್ನಲ್ಲಿ ಟಿಕೆಟ್ ಕಾಯ್ದಿರಿಸಲು ಬುಕಿಂಗ್ ವಿಂಡೋ ತೆರೆದ ಮೊದಲ 15 ನಿಮಿಷಗಳಲ್ಲಿ ಟಿಕೆಟ್ ಬುಕ್ ಮಾಡಲು ಮುಂದಾಗುವವರು ಕಡ್ಡಾಯವಾಗಿ ಆಧಾರ್ ದೃಢೀಕರಣ ಮಾಡಬೇಕಾಗುತ್ತದೆ. ಮಧ್ಯವರ್ತಿಗಳು ಮತ್ತು ಬೋಟ್ಗಳ ಮೂಲಕ ದೊಡ್ಡ ಪ್ರಮಾಣದಲ್ಲಿ ಟಿಕೆಟ್ ಕಾಯ್ದಿರಿಸುವುದನ್ನು ತಡೆಯಲು ರೈಲ್ವೆ ಇಲಾಖೆ ಈ ಕ್ರಮ ಕೈಗೊಂಡಿದೆ. ತತ್ಕಾಲ್ ಯೋಜನೆಯಲ್ಲಿ ಈಗಾಗಲೇ ಆಧಾರ್ ಕಡ್ಡಾಯವಾಗಿದ್ದರೂ, ಇನ್ನುಮುಂದೆ ಸಾಮಾನ್ಯ ರಿಸರ್ವೇಶನ್ಗಳಿಗೂ ಇದೇ ನಿಯಮ ಅನ್ವಯವಾಗಲಿದೆ.

ಬುಕಿಂಗ್ ವಿಂಡೋ ತೆರೆದ 15 ನಿಮಿಷಗಳ ನಂತರ ಯಾರೂ ಬೇಕಾದರೂ ಆಧಾರ್ ಇಲ್ಲದೆ ಟಿಕೆಟ್ ಬುಕ್ ಮಾಡಬಹುದು. ಆದರೆ ಕೌಂಟರ್ಗಳಲ್ಲಿ ಯಥಾಪ್ರಕಾರ ಟಿಕೆಟ್ ಬುಕ್ ಮಾಡಿಕೊಳ್ಳಬಹುದು, ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ರೈಲು ಏಜೆಂಟ್ಗಳಿಗೆ ಈಗಿರುವ ನಿಯಮವೇ ಮುಂದುವರಿಯಲಿದೆ – ಅಂದರೆ, ಬುಕಿಂಗ್ ವಿಂಡೋ ತೆರೆದ ಮೊದಲ 10 ನಿಮಿಷ ಏಜೆಂಟ್ಗಳಿಗೆ ಅವಕಾಶ ಇರುವುದಿಲ್ಲ. ಐಆರ್ಸಿಟಿಸಿ ಖಾತೆ ತೆರೆದು ಅದನ್ನು ಆಧಾರ್ಗೆ ಲಿಂಕ್ ಮಾಡಿಕೊಂಡಿರುವವರು ಮೊದಲ 15 ನಿಮಿಷದಲ್ಲೇ ಆನ್ಲೈನ್ ಮೂಲಕ ಆಧಾರ್ ದೃಢೀಕರಣದೊಂದಿಗೆ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.




