ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ Messi ಭಾರತಕ್ಕೆ ಭೇಟಿ ನೀಡಿದ್ದರು.

ಕೋಟ್ಯಾಂತರ ಅಭಿಮಾನಿಗಳ ಆರಾಧ್ಯ ದೈವ, ಅರ್ಜೆಂಟೀನಾದ ಫುಟ್ಬಾಲ್ ಮಾಂತ್ರಿಕ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಭೇಟಿ ನೀಡಿದ್ದು ಅಭಿಮಾನಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ.
‘ಗೋಟ್ ಇಂಡಿಯಾ ಟೂರ್ 2025’ (GOAT India Tour) ಅಡಿಯಲ್ಲಿ ಮೆಸ್ಸಿ ದೇಶದ ಪ್ರಮುಖ ನಗರಗಳಾದ ಕೋಲ್ಕತ್ತ, ಹೈದರಾಬಾದ್, ಮುಂಬೈ ಮತ್ತು ದೆಹಲಿಗಳಿಗೆ ಭೇಟಿ ನೀಡಿದ್ದು, ಬಳಿಕ ಗುಜರಾತ್ನ ಜಾಮ್ನಗರದಲ್ಲಿರುವ ವಂಟಾರಾಗೂ ತೆರಳಿದ್ದಾರೆ.
ವಂಟಾರಾ ಎಂದರೇನು?
ವಂಟಾರಾ ರಿಲಯನ್ಸ್ ಇಂಡಸ್ಟ್ರೀಸ್ ಹಾಗೂ ರಿಲಯನ್ಸ್ ಫೌಂಡೇಶನ್ ಆರಂಭಿಸಿರುವ ವಿಶ್ವದ ಅತಿದೊಡ್ಡ ವನ್ಯಜೀವಿ ರಕ್ಷಣೆ, ಆರೈಕೆ ಮತ್ತು ಪುನರ್ವಸತಿ ಕೇಂದ್ರವಾಗಿದೆ. ಇಲ್ಲಿ ಪ್ರಾಣಿಗಳ ಸಂರಕ್ಷಣೆಗಾಗಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿವೆ.

ಆನೆಗಳೊಂದಿಗೆ ಫುಟ್ಬಾಲ್ ಆಡಿದ ಮೆಸ್ಸಿ
ವಂಟಾರಾಗೆ ಭೇಟಿ ನೀಡಿದ ಮೆಸ್ಸಿ, ಪ್ರಾಣಿಗಳೊಂದಿಗೆ ಸಮಯ ಕಳೆಯುವ ಮೂಲಕ ಎಲ್ಲರ ಗಮನ ಸೆಳೆದರು. ವಿಶೇಷವಾಗಿ ಮಾಣೆಕ್ಲಾಲ್ ಎಂಬ ಮರಿ ಆನೆಯೊಂದಿಗೆ ಫುಟ್ಬಾಲ್ ಆಡಿದ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ತ್ರಿಪುರಾದಿಂದ ವಂಟಾರಾಗೆ ಕರೆತರಲಾಗಿರುವ ಮಾಣೆಕ್ಲಾಲ್, ಫುಟ್ಬಾಲ್ ಮೇಲಿನ ಪ್ರೀತಿಗೆ ಪ್ರಸಿದ್ಧವಾಗಿದೆ. ಮೆಸ್ಸಿ ಎಸೆದ ಫುಟ್ಬಾಲ್ಗೆ ಆನೆ ಪ್ರತಿಕ್ರಿಯಿಸಿದ ದೃಶ್ಯಗಳು ನೋಡುಗರಿಗೆ ರೋಮಾಂಚನ ನೀಡಿವೆ.
ಸಿಂಹಗಳು, ಪ್ರಾಣಿಗಳ ಆರೈಕೆ ನೋಡಿ ಮೆಚ್ಚುಗೆ
ಮೆಸ್ಸಿ ಸಿಂಹಗಳನ್ನು ಹತ್ತಿರದಿಂದ ವೀಕ್ಷಿಸಿದರು, ಪ್ರಾಣಿಗಳ ಆರೈಕೆಯನ್ನು ಗಮನಿಸಿದರು. ಅಲ್ಲಿನ ಪಶುವೈದ್ಯಕೀಯ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿ, ವಂಟಾರಾದಲ್ಲಿ ನಡೆಯುತ್ತಿರುವ ಕಾರ್ಯಗಳನ್ನು ಪ್ರಶಂಸಿಸಿದರು.
ಇದನ್ನು ಓದಿ : ಮತ್ತಷ್ಟು ದುಬಾರಿಯಾದ ಚಿನ್ನ, ಬೆಳ್ಳಿ ಬೆಲೆ

ಭಾರತೀಯ ಆಧ್ಯಾತ್ಮಿಕತೆಗೆ ಮೆಸ್ಸಿ ಮನಸೊತ್ತು
ವಂಟಾರಾದಲ್ಲಿ Messi ಗೆ ಭಾರತೀಯ ಆಧ್ಯಾತ್ಮಿಕ ಲೋಕದ ಪರಿಚಯವೂ ಆಯಿತು. ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಶಿವಲಿಂಗಕ್ಕೆ ಹಾಲು ಅರ್ಪಿಸಿ, ಭಾರತೀಯ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು.
ಇನ್ನು ಧ್ಯಾನದಲ್ಲೂ ತೊಡಗಿಕೊಂಡು ಆ ಕ್ಷಣಗಳನ್ನು ಆಳವಾಗಿ ಅನುಭವಿಸಿದ್ದಾರೆ ಎಂದು ವರದಿಯಾಗಿದೆ.
“ಇದು ನಿಜಕ್ಕೂ ಸುಂದರವಾಗಿದೆ” – ಮೆಸ್ಸಿ
ವಂಟಾರಾದಲ್ಲಿ ಕಳೆದ ಅನುಭವದ ಬಗ್ಗೆ ಮಾತನಾಡಿದ ಮೆಸ್ಸಿ, “ಪ್ರಾಣಿಗಳಿಗಾಗಿ ಇಲ್ಲಿ ಮಾಡುತ್ತಿರುವ ಕೆಲಸ ನಿಜಕ್ಕೂ ಅದ್ಭುತ. ಅವುಗಳಿಗೆ ಸಿಗುವ ಆರೈಕೆ, ರಕ್ಷಣೆ ಮತ್ತು ಕಾಳಜಿ ಪ್ರಶಂಸನೀಯ. ನಾವು ಇಲ್ಲಿ ಅದ್ಭುತ ಸಮಯವನ್ನು ಕಳೆದಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನು ನೋಡಿ : ಶಿರಾಗೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ ಅಧ್ಯಕ್ಷೆಯ ಮುಂದೆ ಮಹಿಳೆಯರ ಕಣ್ಣೀರು

