
BANGALORE: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳನ್ನು ಇಂದು ಬೆಂಗಳೂರು 64ನೇ ಸೆಷನ್ಸ್ ಕೋರ್ಟ್ನಲ್ಲಿ ವಿಚಾರಣೆಗಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಇನ್ನು ಈ ಪ್ರಕರಣ 57ನೇ ಸೆಷನ್ಸ್ ಕೋರ್ಟ್ಗೆ ಸೇರಿದ್ದು. ಆದರೆ ಜಡ್ಜ್ ಲಭ್ಯವಿಲ್ಲದ ಕಾರಣ ವಿಚಾರಣೆ 64ನೇ ಸೆಷನ್ಸ್ ಕೋರ್ಟ್ನಲ್ಲಿಯೇ ನಡೆಯಿತು. ಇನ್ನು ವಿಚಾರಣೆಯಲ್ಲಿ, ದರ್ಶನ್ ಪರ ವಕೀಲರು ಅವರನ್ನು ಪ್ರಕರಣದಿಂದ ಡಿಸ್ಚಾರ್ಜ್ ಮಾಡಬೇಕು ಎಂಬ ಮನವಿಯನ್ನು ಕೋರ್ಟ್ಗೆ ಸಲ್ಲಿಸಿದರು. ಪ್ರಕರಣದಲ್ಲಿ ದರ್ಶನ್ನ ಪಾತ್ರವಿಲ್ಲ ಎಂಬ ಆಧಾರದ ಮೇಲೆ ಈ ಅರ್ಜಿ ನೀಡಲಾಗಿದೆ.
ವಿಡಿಯೋ ಕಾನ್ಫರೆನ್ಸ್ ವೇಳೆ, ದರ್ಶನ್ ತಮ್ಮ ಬೆನ್ನಿನಲ್ಲಿ ನೋವಿದೆ ಎಂದು ಪದೇಪದೆ ತೋರಿಸುತ್ತಾ, ಜೈಲಿನಲ್ಲಿ ಸೂಕ್ತ ವೈದ್ಯಕೀಯ ಹಾಗೂ ಇತರ ಸೌಲಭ್ಯಗಳಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಅಲ್ದೇ”ಕೋರ್ಟ್ ಹೇಳಿದಂತೆ ಯಾವುದೇ ಸೌಲಭ್ಯಗಳನ್ನು ಜೈಲಿನಲ್ಲಿ ಕೊಡಲಾಗುತ್ತಿಲ್ಲ ಸರ್. ವಾಕ್ ಮಾಡಲು 15 ಅಡಿ ಜಾಗ ಇದೆ ಅಷ್ಟೆ. ಬಿಸಿಲೂ ಬಾರದಷ್ಟು ಜಾಗ…” ಎಂದು ದರ್ಶನ್ ಹೇಳಿದ್ದಾರೆ.
ಪ್ರಕರಣದ ಎ1 ಆರೋಪಿ ನಟಿ ಪವಿತ್ರಾ ಗೌಡ ಕೂಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆಯ ನಂತರ, ನ್ಯಾಯಾಲಯ ಮುಂದಿನ ದಿನಾಂಕವನ್ನು ಅಕ್ಟೋಬರ್ 9 ತಾರೀಖಿಗೆ ನಿಗದಿಪಡಿಸಿದೆ. ಈ ವೇಳೆಗೆ ಡಿಸ್ಚಾರ್ಜ್ ಅರ್ಜಿ ಕುರಿತು ನಿರ್ಣಯವನ್ನು ನಿರೀಕ್ಷಿಸಲಾಗಿದೆ.




