Vijayanagara : ಮಗನ ಜೊತೆಗೆ ಜಗಳವಾಡ್ತಿದ್ದ ಯುವಕರ ಗುಂಪು, ಬಿಡಿಸಲು ಹೋದ ತಂದೆಯನ್ನೇ ಕೊಲೆಗೈದ ಗ್ಯಾಂಗ್!

Vijayanagara ಜಿಲ್ಲೆಯ ಹೊಸಪೇಟೆ ನಗರದ ಕಾರಿಗನೂರು ಪ್ರದೇಶದಲ್ಲಿ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಯುವಕರ ಜಗಳವು ಹೃದಯವಿದ್ರಾವಕ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ. ಮಗನೊಂದಿಗೆ ಜಗಳವಾಡುತ್ತಿದ್ದ ಯುವಕರ ಗುಂಪನ್ನು ಬಿಡಿಸಲು ಹೋಗಿದ್ದ ತಂದೆಯೇ ಯುವಕರ ಹಲ್ಲೆಗೆ ಬಲಿಯಾಗಿದ್ದಾರೆ.
ಆರೋಪಿಗಳ ಬಂಧನ
ಇನ್ನು ಆರೋಪಿಗಳನ್ನು ಭಂಗಿ ಹನುಮಂತ, ಚರಣ, ಹುಲಿಗೆಮ್ಮ, ರಾಘವೇಂದ್ರ, ಚಂದ್ರಶೇಖರ, ಗುರುರಾಯ ಮತ್ತು ದರ್ಶನ್ ಎಂದು ಗುರುತಿಸಲಾಗಿದೆ. ಆರೋಪಿಗಳನ್ನು ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿ ಬಂಧಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ ತಿಳಿಸಿದ್ದಾರೆ.
ಇದನ್ನು ಓದಿ : ಇಂದು ಚಿನ್ನದ ದರದಲ್ಲಿ ಕೊಂಚ ಇಳಿಕೆ

ಯುವಕರಿಂದ ಹಲ್ಲೆ
ಮೃತ ವ್ಯಕ್ತಿಯನ್ನು ಕಾರಿಗನೂರು ನಿವಾಸಿ ಮಾಬುಸಾಬ್ (50) ಎಂದು ಗುರುತಿಸಲಾಗಿದೆ. ಸ್ಥಳೀಯ ಮಾಹಿತಿಯ ಪ್ರಕಾರ, ಮಾಬುಸಾಬ್ ಅವರ ಎರಡನೇ ಮಗ ಮೌಲಾಹುಸೇನ್ ಮತ್ತು ಯುವಕರ ನಡುವೆ ಜಗಳ ನಡೆಯುತ್ತಿತ್ತು. ಈ ಜಗಳ ತೀವ್ರ ಸ್ವರೂಪ ಪಡೆದು, ಸುಮಾರು 15ಕ್ಕೂ ಹೆಚ್ಚು ಜನರ ಯುವಕರ ಗುಂಪು ಮೌಲಾಹುಸೇನ್ ಮೇಲೆ ಹಲ್ಲೆಗೆ ಮುಂದಾಯಿತು.
ಸ್ಥಳದಲ್ಲೇ ಸಾವು
ಮಗನ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಗಮನಿಸಿದ ತಂದೆ ಮಾಬುಸಾಬ್ ಜಗಳವನ್ನು ಶಮನಗೊಳಿಸಲು ಮಧ್ಯ ಪ್ರವೇಶಿಸಿದ್ದಾರೆ. ಆದರೆ, ಜಗಳ ಬಿಡಿಸಲು ಹೋದ ತಂದೆಯ ಮೇಲೆಯೇ ಆಕ್ರೋಶಗೊಂಡ ಯುವಕರ ಗುಂಪು ಹಲ್ಲೆ ನಡೆಸಿದ್ದು, ಈ ವೇಳೆ ಮಾಬುಸಾಬ್ ಅವರ ಎದೆಗೆ ತೀವ್ರವಾಗಿ ಹೊಡೆದಿದ್ದಾರೆ. ಪರಿಣಾಮವಾಗಿ ಅವರು ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಇದನ್ನು ನೋಡಿ : ರಣ ರಂಗವಾಯ್ತು ವಿಧಾನ ಪರಿಷತ್ – ಸಭಾ ತ್ಯಾಗ ಮಾಡಿದ ಹೊರಟ್ಟಿ




