Rain Alert : ರಾಜ್ಯದಲ್ಲಿ ಭಾರಿ ಮಳೆ ಮುನ್ನೆಚ್ಚರಿಕೆ: ಈ 7 ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್, ಕಡಲತೀರದಲ್ಲಿ ಹೈ ಅಲರ್ಟ್!

ರಾಜ್ಯದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಜುಲೈ 8ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಹವಾಮಾನ ಇಲಾಖೆ ಅಂದಾಜಿನ ಪ್ರಕಾರ, ಈ ಭಾಗಗಳಲ್ಲಿ 64.5 ಮಿ.ಮೀ.ದಿಂದ 115.4 ಮಿ.ಮೀ.ವರೆಗೆ ಭಾರೀ ಮಳೆ, ಕೆಲವೆಡೆ 115 ರಿಂದ 204 ಮಿ.ಮೀ.ವರೆಗೆ ಅತಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ.
ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಎಚ್ಚರಿಕೆ
ನಿರಂತರ ಮಳೆಯ ಪರಿಣಾಮ ಘಟ್ಟ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ, ಆ ಮಾರ್ಗಗಳಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಸ್ಥಳೀಯರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ವಿಪತ್ತು ನಿರ್ವಹಣಾ ಕೇಂದ್ರ ಮನವಿ ಮಾಡಿದೆ.

ಕರಾವಳಿಯಲ್ಲಿ ರಾಕ್ಷಸ ಅಲೆಗಳ ಎಚ್ಚರಿಕೆ
ಬಲವಾದ ಗಾಳಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಸಮುದ್ರ ಅಲೆಗಳ ಎತ್ತರ ಹೆಚ್ಚಾಗುವ ಸಾಧ್ಯತೆ ಇದೆ.
- ದಕ್ಷಿಣ ಕನ್ನಡ (ಮುಲ್ಕಿಯಿಂದ ಮಂಗಳೂರು): ಜುಲೈ 9 ಮಧ್ಯಾಹ್ನ 2.30ರವರೆಗೆ ಸುಮಾರು 3.5 ಮೀಟರ್ ಎತ್ತರದ ಅಲೆಗಳು.
- ಉಡುಪಿ (ಬೈಂದೂರಿನಿಂದ ಕಾಪು): ಜುಲೈ 9 ಬೆಳಗ್ಗೆ 11.30ರವರೆಗೆ 3.4 ರಿಂದ 3.5 ಮೀಟರ್ ಎತ್ತರದ ಅಲೆಗಳು.
- ಉತ್ತರ ಕನ್ನಡ (ಮಾಜಾಳಿಯಿಂದ ಭಟ್ಕಳ): ಜುಲೈ 9 ಸಂಜೆ 5.30ರವರೆಗೆ 3.2 ರಿಂದ 3.5 ಮೀಟರ್ ಎತ್ತರದ ಅಲೆಗಳ ಸಾಧ್ಯತೆ.
ಈ ಹಿನ್ನೆಲೆಯಲ್ಲಿ ಮೀನುಗಾರರು, ಪ್ರವಾಸಿಗರು ಹಾಗೂ ಸಾರ್ವಜನಿಕರು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಡಲತೀರದ ಮನರಂಜನಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಸಲಹೆ ನೀಡಲಾಗಿದೆ.
ಇದನ್ನು ಓದಿ : ರಾಜ್ಯದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂಗಾರು ಅಬ್ಬರ – ಶಾಲೆಗಳಿಗೆ ರಜೆ
ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ಸಹಿತ ಮಳೆ
ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲೂ ಮಳೆಯ ಜೊತೆಗೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇದೆ.
ಗಂಟೆಗೆ 50–60 ಕಿ.ಮೀ. ವೇಗದ ಗಾಳಿ:
- ಮೈಸೂರು
- ಬೆಂಗಳೂರು ಗ್ರಾಮಾಂತರ
- ಚಿಕ್ಕಬಳ್ಳಾಪುರ

ಗಂಟೆಗೆ 40–50 ಕಿ.ಮೀ. ವೇಗದ ಗಾಳಿ:
- ಬೆಂಗಳೂರು ನಗರ
- ಬೆಂಗಳೂರು ದಕ್ಷಿಣ
- ಕೋಲಾರ
- ಮಂಡ್ಯ
- ಚಾಮರಾಜನಗರ
- ತುಮಕೂರು
- ಚಿತ್ರದುರ್ಗ
- ದಾವಣಗೆರೆ
- ಬಳ್ಳಾರಿ
- ವಿಜಯನಗರ
ಈ ಜಿಲ್ಲೆಗಳ ಹಲವೆಡೆ ಸಾಧಾರಣ ಮಳೆಯೊಂದಿಗೆ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಜುಲೈ 9ಕ್ಕೆ ಯಲ್ಲೋ ಅಲರ್ಟ್
ಜುಲೈ 9ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗುವ ನಿರೀಕ್ಷೆಯಿದ್ದರೂ, ಭಾರೀ ಮಳೆಯ ಸಾಧ್ಯತೆ ಮುಂದುವರಿಯಲಿದ್ದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.

ಸಾರ್ವಜನಿಕರಿಗೆ ಸಲಹೆ
ಭಾರೀ ಮಳೆ ಮತ್ತು ಬಿರುಗಾಳಿಯ ಹಿನ್ನೆಲೆ ಸಾರ್ವಜನಿಕರು ಹಳೆಯ ಕಟ್ಟಡಗಳು, ವಿದ್ಯುತ್ ಕಂಬಗಳು, ನದಿ ಹಾಗೂ ಸಮುದ್ರ ತೀರಗಳ ಬಳಿ ಹೋಗುವುದನ್ನು ತಪ್ಪಿಸಬೇಕು. ಗುಡ್ಡಗಾಡು ಪ್ರದೇಶಗಳಿಗೆ ಅನಗತ್ಯ ಪ್ರಯಾಣ ಮಾಡದಂತೆ ಹಾಗೂ ಹವಾಮಾನ ಇಲಾಖೆಯ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನು ನೋಡಿ : ಸ್ಕೈವಾಕ್ ಇಲ್ಲದೇ ವಿದ್ಯಾರ್ಥಿಗಳ ಪರದಾಟ – ಹೆದ್ದಾರಿ ದಾಟುವುದೇ ದೊಡ್ಡ ಸವಾಲು





