ಶಿರಾ:
ತುಮಕೂರು ಜಿಲ್ಲೆ ಶಿರಾ ತಾಲೂಕಿನ ದೊಡ್ಡಗುಳ ಗ್ರಾಮ ಕಾವ್ಯ ಯುವತಿಯನ್ನು ಅದೇ ಗ್ರಾಮದ ಈರಣ್ಣ ಅಲಿಯಾಸ್ ಸಣ್ಣೀರು ಎಂಬಾತ ಮದುವೆ ಮಾಡಿಕೊಳ್ಳುವಂತೆ ಪೀಡಿಸ್ತಾ ಇದ್ದ, ಆದ್ರೆ ಮದುವೆಗೆ ಒಪ್ಪದ ಕಾವ್ಯಳನ್ನು ಈರಣ್ಣ ಕೊಚ್ಚಿ ಕೊಲೆ ಮಾಡಿದ್ದ. 2021 ಏಪ್ರಿಲ್ 5 ರಂದು ಯುವತಿ ಕಾವ್ಯ ಸ್ನೇಹಿತರೊಂದಿಗೆ ಕಾಲೇಜಿಗೆ ಹೊರಟಿದ್ದಳು, ಈ ವೇಳೆ ಕೊಲೆ ಅಪರಾಧಿ ಈರಣ್ಣ ಬೈಕ್‌ನಲ್ಲಿ ಬಂದು ಕಾವ್ಯಳನ್ನು ದೊಡ್ಡಗುಳ ಕೆರೆ ಬಳಿ ಎಳೆದುಕೊಂಡು ಹೋಗಿ, ತನ್ನನ್ನು ಮದುವೆಯಾಗುವಂತೆ ಪೀಡಿಸಿ ತಾಳಿ ತೋರಿಸಿ ಹೆದರಿಸಿದ್ದ.
ಇದ್ರಿಂದ ಸಿಟ್ಟಾದ ಕಾವ್ಯ, ಈರಣ್ಣ ಕಪಾಳಕ್ಕೆ ಹೊಡೆದು ಮದುವೆ ಆಗೋದಿಲ್ಲ ಅಂತಾ ಬೈದಿದ್ದಾಳೆ. ಇಷ್ಟಕ್ಕೆ ಸುಮ್ಮನೆ ಆಗದ ಆರೋಪಿ ಈರಣ್ಣ, ಕುಡುಗೋಲಿನಿಂದ ಕಾವ್ಯಳ ಮುಖ, ಕುತ್ತಿಗೆ, ಮುಂಗೈಗಳಿಗೆ ಹೊಡೆದು ಕೊಚ್ಚಿ ಕೊಲೆ ಮಾಡಿದ್ದಾನೆ.
ಯುವತಿ ಕಾವ್ಯ ಕೊಲೆ ಪ್ರಕರಣ ಸಂಬಂಧ ಆರೋಪಿ ಈರಣ್ಣನನ್ನು ಕಳ್ಳಂಬೆಳ್ಳ ಪೊಲೀಸರು ಬಂಧಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿ ಈರಣ್ಣ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಪ್ರಧಾನ ಸರ್ಕಾರಿ ಅಭಿಯೋಜಕಿ ಆರ್.ಟಿ ಅರುಣ ವಾದ ಮಂಡಿಸಿದ್ದರು. ವಾದ- ಪ್ರತಿವಾದ ಆಲಿಸಿದ ತುಮಕೂರು ನ್ಯಾಯಾಲಯದ ನ್ಯಾಯಾಧೀಶ ಜಯಂತ್ ಕುಮಾರ್ ಪೀಠ ಕೊಲೆ ಅಪರಾಧಿ ಈರಣ್ಣಗೆ ಜೀವಾವಧಿ ಶಿಕ್ಷೆ ಹಾಗೂ 20 ಸಾವಿರದ ಕಠಿಣ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ನೀಡಿದೆ.
ನಾಲ್ಕು ವರ್ಷದ ಹಿಂದೆ ನಡೆದಿದ್ದ ಕೊಲೆ ಪ್ರಕರಣದ ತೀರ್ಪುನ್ನು ನೀಡಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿದೆ. ಪ್ರಕರಣದ ತೀರ್ಪಿನಿಂದಾಗಿ ಮುಂದಿನ ದಿನಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಎಚ್ಚರಿಕೆಯ ಗಂಟೆಯಾಗಿದೆ.