ಶಿರಾ:
ಬಿಜೆಪಿ ಸರ್ಕಾರದ ಮಹತ್ವದ ಯೋಜನೆಯಾದ ಜಿಲ್ಲೆಗೊಂದು ಗೋ ಶಾಲೆ ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಅದಕ್ಕೆ ಸ್ಪಷ್ಟ ಸಾಕ್ಷ್ಯದಂತಿದೆ ಶಿರಾ ತಾಲೂಕಿನ ಚಿಕ್ಕಬಾಣಗೆರೆಯಲ್ಲಿರೋ ಸರ್ಕಾರಿ ಗೋ ಶಾಲೆ. ಈ ಗೋಶಾಲೆಯ ಸಿಬ್ಬಂದಿ ವರ್ಗದ ನಿರ್ಲಕ್ಷ್ಯ, ಆರ್ಥಿಕ ನೆರವಿನ ಕೊರತೆಯಿಂದಾಗಿ ಇಲ್ಲಿನ ಗೋ ಶಾಲೆ ಸೊರಗಿದ್ದು, ಇಲ್ಲಿನ ಗೋವುಗಳ ಸ್ಥಿತಿ ಹದಗೆಟ್ಟಿದೆ, ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿ ಗೋ ಶಾಲೆಗೆ ತಂದು ಬಿಡುತ್ತಾರೆ. ಆದರೆ ಇಲ್ಲಿನ ಗೋವುಗಳು ಮೇವು ಇಲ್ಲದೇ ಸೊರಗುತ್ತಿವೆ.
ಇನ್ನು ಬಾಣಗೆರೆಯಲ್ಲಿರೋ ಗೋ ಶಾಲೆ ವಿಶಾಲವಾದ ಪ್ರದೇಶದಲ್ಲಿದ್ದು ಸುಮಾರು 52 ಗೋವುಗಳನ್ನು ಪಾಲನೆ ಮಾಡಲಾಗ್ತಿದೆ. ಆದರೆ ಗೋ ಶಾಲೆಯಲ್ಲಿ ಪಶುಪಾಲನೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಗೋವುಗಳು ಸೊರಗುವಂತಾಗಿದೆ. ಇಲ್ಲಿನ ಗೋವುಗಳಿಗೆ ಒಣ ಹುಲ್ಲೆ ಗತಿಯಾಗಿದ್ದು, ಮೇವಿನ ಕೊರತೆ ಹಾಗೂ ನೀರಿನ ಸಮಸ್ಯೆಯನ್ನು ಎದುರಿಸುತ್ತಿವೆ. ಜೊತೆಗೆ ರಾತ್ರಿ ವೇಳೆಯಲ್ಲಿ ಪಾಲಕರ ನೆರವಿಗೆ ಸಿಸಿ ಟಿವಿ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಇದಲ್ಲದೇ ವಾರಕ್ಕೊಮ್ಮೆ ಗೋ ಶಾಲೆಗಳಿಗೆ ಪಶು ವೈದ್ಯರು ಭೇಟಿ ನೀಡಿ ತಪಾಸಣೆ ನಡೆಸಬೇಕು ಆದರೆ ವೈದ್ಯರೂ ಕೂಡ ನಿರ್ಲಕ್ಷ್ಯ ತೋರುತ್ತಿರುವ ಆರೋಪ ಕೂಡ ಕೇಳಿ ಬಂದಿದೆ. ಇನ್ನಾದರೂ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡು ಗೋ ಶಾಲೆಗಳಿಗೆ ಬೇಕಾದ ನೆರವನ್ನು ನೀಡಿ ಗೋವುಗಳನ್ನು ರಕ್ಷಣೆ ಮಾಡಬೇಕಿದೆ.