IND vs ENG: ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 4 ವಿಕೆಟ್ಗಳಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ ಇದೀಗ ಫೆಬ್ರವರಿ 9 ರಂದು ಕಟಕ್‌ನಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ಗುರಿ ಹೊಂದಿದೆ. ಇಂಗ್ಲೆಂಡ್ ಕೂಡ ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಬೇಕೆಂದು ಬಯಸುತ್ತಿದೆ.
ಈ ನಡುವೆ ಟೀಂ ಇಂಡಿಯಾಕ್ಕೆ ಕೊಂಚ ಸಮಾಧಾನಕರ ಸುದ್ದಿ ಸಿಕ್ಕಿದ್ದು, ಇಂಜುರಿಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ವಿರಾಟ್ ಕೊಹ್ಲಿ, ಎರಡನೇ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿದ್ದು, ತಂಡದಲ್ಲಿ ಆಡುವುದು ಖಚಿತ ಎಂದು ವರದಿಯಾಗಿದೆ. ಮೊದಲ ಪಂದ್ಯದಿಂದ ಗಾಯದಿಂದ ಹೊರಗಿದ್ದ ವಿರಾಟ್ ಕೊಹ್ಲಿ ಎರಡನೇ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಕೊಹ್ಲಿಅವರ ಆಗಮನದಿಂದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ತಂಡದಿಂದ ಹೊರಬೀಳುವ ಸಾಧ್ಯತೆಯಿದೆ.
ವರದಿಯ ಪ್ರಕಾರ, ಪ್ರಸ್ತುತ ಕೊಹ್ಲಿ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಎರಡನೇ ಏಕದಿನ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ. ಚಾಂಪಿಯನ್ಸ್ ಟ್ರೋಫಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗುವುದರಿಂದ ಕೊಹ್ಲಿ ಎರಡನೇ ಏಕದಿನ ಪಂದ್ಯವನ್ನು ಆಡುವುದು ಅತ್ಯವಶ್ಯಕವಾಗಿದೆ. ಏಕೆಂದರೆ ಕೊಹ್ಲಿ ಕೂಡ ರೋಹಿತ್ರಂತೆ ಕಳೆದ ಕೆಲವು ದಿನಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಹೀಗಾಗಿ ಉಳಿದಿರುವ ಎರಡು ಪಂದ್ಯಗಳಲ್ಲಿ ಕೊಹ್ಲಿ ಆಡುವ ಮೂಲಕ ತಮ್ಮ ಹಳೆಯ ಲಯಕ್ಕೆ ಮರಳಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ನಾಗ್ಪುರ ಏಕದಿನ ಪಂದ್ಯಕ್ಕೂ ಮುನ್ನ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಮೊಣಕಾಲಿಗೆ ಇಂಜುರಿಯಾಗಿದೆ ಎಂಬ ಮಾಹಿತಿ ಹೊರಬಿದ್ದಿತ್ತು. ಆ ಬಳಿಕ ಪಂದ್ಯದಿಂದ ಹೊರಗುಳಿದಿದ್ದ ಕೊಹ್ಲಿ ಅವರ ಕಾಲಿಗೆ ಬ್ಯಾಂಡೇಜ್ ಸುತ್ತಿರುವುದು ಕೂಡ ಫೋಟೋ ಹಾಗೂ ವಿಡಿಯೋ ಮೂಲಕ ವೈರಲ್ ಆಗಿತ್ತು. ಮೊದಲ ಪಂದ್ಯದ ಟಾಸ್ ವೇಳೆ ಈ ಬಗ್ಗೆ ಮಾತನಾಡಿದ್ದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಬಲಗಾಲಿನ ನೋವಿನಿಂದ ಬಳಲುತ್ತಿದ್ದು, ಅವರಿಗೆ ಮೊದಲ ಏಕದಿನ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ ಎಂದಿದ್ದರು.
ವಿರಾಟ್ ಕೊಹ್ಲಿ ಎರಡನೇ ಏಕದಿನ ಪಂದ್ಯದಲ್ಲಿ ಆಡುವುದು ಖಚಿತವಾದರೆ, ತಂಡದಲ್ಲಿ ಬದಲಾವಣೆಯಾಗುವುದು ಖಚಿತ. ಅದರಂತೆ ಮೊದಲನೇ ಏಕದಿನ ಪಂದ್ಯದಲ್ಲಿ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ತಂಡದಿಂದ ಹೊರಗುಳಿಯಬೇಕಾಗುತ್ತದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಜೈಸ್ವಾಲ್ಗೆ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಇದರ ಜೊತೆಗೆ ಜೈಸ್ವಾಲ್ ಹೊರತುಪಡಿಸಿ ಟಾಪ್ 4 ರಲ್ಲಿ ಆಡುವ ಉಳಿದ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಹೀಗಾಗಿ ಜೈಸ್ವಾಲ್ಗೆ ತಂಡದಿಂದ ಗೇಟ್ಪಾಸ್ ನೀಡಿ ಕೊಹ್ಲಿಗೆ ಅವಕಾಶ ನೀಡಬೇಕಾಗುತ್ತದೆ.