Virat Kohli :
ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್ ಕಂಡ ಗ್ರೇಟ್ ಬ್ಯಾಟ್ಸ್‌ಮನ್ ದಶಕಗಳ ಕಾಲ ಕ್ರಿಕೆಟ್ ಜಗತ್ತನ್ನೇ ಆಳಿದ ಕಿಂಗ್. ದಾಖಲೆಗಳ ಸರದಾರ. ಚೇಸಿಂಗ್ ಮಾಸ್ಟರ್, ರನ್ ಮಷಿನ್ ಈ ದಿಗ್ಗಜ ಆಟಗಾರನಿಗಿರೋ ಬಿರುದುಗಳು ಒಂದಲ್ಲಾ ಎರಡಲ್ಲಾ ಕ್ರಿಕೆಟ್ ಮೂರು ಫಾರ್ಮ್ಯಾಟ್‌ಗಳಲ್ಲೂ ಮಿಂಚು ಹರಿಸಿದ್ದ ಕಿಂಗ್ ಕೊಹ್ಲಿ, ಈಗಾಗಲೇ ಟಿ-೨೦ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಇದೀಗ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೂ ಗುಡ್ ಬೈ ಹೇಳೋದಕ್ಕೆ ಸಜ್ಜಾಗಿದ್ದಾರೆ ಅನ್ನೋ ಸುದ್ದಿಗಳು ಹೊರಬೀಳ್ತಾ ಇದ್ದು, ಅಭಿಮಾನಿಗಳು ಶಾಕ್ ಆಗಿದ್ದಾರೆ.
ಮೊನ್ನೆಯಷ್ಟೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದುತ್ತಿರುವುದಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ದಿಗ್ಗಜ ಕಿಂಗ್ ಕೊಹ್ಲಿ ಕೂಡ ವೈಟ್ ಜೆರ್ಸಿಗೆ ಗುಡ್ ಬೈ ಹೇಳಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡ್ತಿವೆ.
ಪ್ರಮುಖ ಇಂಗ್ಲಿಷ್ ಪತ್ರಿಕೆಗಳ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಬಯಸಿದ್ದಾರಂತೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತನ್ನನ್ನು ಆಯ್ಕೆ ಮಾಡಬೇಡಿ. ತಾನು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತನಾಗಲು ನಿರ್ಧರಿಸಿದ್ದೇನೆ ಅಂತಾ ವಿರಾಟ್ ಕೊಹ್ಲಿ ಬಿಸಿಸಿಐ ಆಯ್ಕೆ ಸಮಿತಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ ವಿರಾಟ್ ಕೊಹ್ಲಿಯ ನಿವೃತ್ತಿಯನ್ನು ಬಿಸಿಸಿಐ ಅಂಗೀಕರಿಸಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ತಮ್ಮ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಆಯ್ಕೆ ಸಮಿತಿ ಕೊಹ್ಲಿಯಲ್ಲಿ ಮನವಿ ಮಾಡಿದ್ದಾರಂತೆ. ಹೀಗಾಗಿ ಇನ್ನೆರಡು ವಾರಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಒಂದು ವೇಳೆ ವಿರಾಟ್ ಕೊಹ್ಲಿ ತಮ್ಮ ನಿರ್ಧಾರದಲ್ಲಿ ಅಚಲವಾಗಿ ನಿಂತರೆ, ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯೇ ಕೊಹ್ಲಿ ಪಾಲಿಗೆ ಅಂತಿಮ ಸಿರೀಸ್ ಆಗಲಿದೆ. ಇದರ ನಡುವೆ ಬಿಸಿಸಿಐ ಕೊಹ್ಲಿಯ ಮನವೊಲಿಸಲು ಯಶಸ್ವಿಯಾದರೆ, ಅವರು ಟೀಮ್ ಇಂಡಿಯಾ ಪರ ಇಂಗ್ಲೆಂಡ್ನಲ್ಲಿ ಕಣಕ್ಕಿಳಿಯಲಿದ್ದಾರೆ.
ದಿಗ್ಗಜ ಆಟಗಾರನಾಗಿರೋ ವಿರಾಟ್ ಕೊಹ್ಲಿ ವಿದಾಯದ ಪಂದ್ಯವನ್ನಾಡದೇ ನಿವೃತ್ತಿ ಹೊಂದಿದರೆ, ಅದರಿಂದ ಕ್ರಿಕೆಟ್ ಪ್ರೇಮಿಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಆತಂಕ ಕೂಡ ಬಿಸಿಸಿಐಗೆ ಇದೆ. ಹೀಗಾಗಿ ಕೊಹ್ಲಿಯನ್ನು ಮನವೊಲಿಸಲು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂದಾಗಿದೆಯಂತೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಕಿಂಗ್ ಕೊಹ್ಲಿ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಅದೇನೇ ಇರಲಿ 37 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ನಿವೃತ್ತಿಯ ಅಂಚಿನಲ್ಲಿರುವುದಂತೂ ಸತ್ಯ. ಆದರೆ ಅದು ಸದ್ಯಕ್ಕೆ ಬೇಡ ಎಂಬುದು ಬಿಸಿಸಿಐನ ನಿರ್ಧಾರ. ಜೊತೆಗೆ ಅಭಿಮಾನಿಗಳ ಆಶಯವೂ ಹೌದು. ಹೀಗಾಗಿ ಕಿಂಗ್ ಕೊಹ್ಲಿ ತಮ್ಮ ನಿರ್ಧಾರವನ್ನು ಬದಲಿಸ್ತಾರಾ? ಅಥವಾ ಇಂಗ್ಲೆಂಡ್ ವಿರುದ್ಧದ ಸರಣಿಯ ಮೂಲಕ ವಿದಾಯ ಹೇಳಲಿದ್ದಾರಾ ಅನ್ನೋದನ್ನು ಕಾದು ನೋಡಬೇಕಿದೆ.