ಗುಬ್ಬಿ :
ನಾವು ಚಿನ್ನ, ಬಂಗಾರ, ದುಡ್ಡನ್ನು ಕದಿಯೋದನ್ನು ನೋಡಿದ್ದೇವೆ. ಅಷ್ಟೇ ಯಾಕೆ ದೇಗುಲದಲ್ಲಿದ್ದ ಹುಂಡಿಯನ್ನು ಕದ್ದಿರೋ ಕಳ್ಳರನ್ನು ಕೂಡ ನೋಡಿದ್ದೇವೆ. ಆದರೆ ಇಲ್ಲೋಬ್ಬ ಆಸಾಮಿ ಬೇರೆಯವರ ಜಮೀನಿನಲ್ಲಿದ್ದ ಬೋರ್‌ವೆಲ್‌ಗಳಿಗೆ ಅಳವಡಿಸಿದ್ದ ಕೇಬಲ್ ವೈರಗಳನ್ನು ಕದ್ದು ಮಾರಾಟ ಮಾಡ್ತಾ ಇದ್ದ. ಬೋರ್‌ವೆಲ್‌ಗಳಲ್ಲಿ ಇದ್ದಕ್ಕಿದ್ದ ಹಾಗೆ ಕೇಬಲ್‌ಗಳು ಕಳ್ಳತನವಾಗ್ತಾ ಇದ್ದು, ಕಳ್ಳನನ್ನು ಹುಡುಕುವುದೇ ಗ್ರಾಮಸ್ಥರಿಗೆ ದೊಡ್ಡ ತಲೆನೋವಾಗಿತ್ತು.
ಗುಬ್ಬಿ ತಾಲೂಕಿನ ಲಕ್ಕೇನಹಳ್ಳಿಯಲ್ಲಿ ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಚೀಲದಲ್ಲಿ ಏನನ್ನೋ ತುಂಬಿಕೊಂಡು ಹೋಗ್ತಿದ್ದ ವೇಳೆ ವಿಚಾರಿಸಿದಾಗ ಕೇಬಲ್ ವೈರ್ ಸಮೇತ ಕಳ್ಳ ಸಿಕ್ಕಿ ಬಿದ್ದಿರೋ ಘಟನೆ ನಡೆದಿದೆ. ಅದೇ ಗ್ರಾಮದ ಹರೀಶ್ ಎಂಬಾತ ಕೇಬಲ್ ವೈರ್ ಕಳ್ಳತನ ಮಾಡ್ತಿರೋದು ಬೆಳಕಿಗೆ ಬಂದಿದೆ. ಇನ್ನು ಲಕ್ಕೇನಹಳ್ಳಿಯ ಶ್ರೀಕಾಂತ್ ಎಂಬ ವ್ಯಕ್ತಿಯ ತೋಟದಲ್ಲಿದ್ದ ಬೋರ್‌ವೆಲ್‌ಗೆ ಅಳವಡಿಸಿದ್ದ 60 ಮೀಟರ್ ಕೇಬಲ್‌ನನ್ನು ಕಳ್ಳರು ಕದ್ದು ಪರಾರಿಯಾಗಿದ್ದರು. ಎಷ್ಟು ಹುಡುಕಾಡಿದರು ಕಳ್ಳನು ಪತ್ತೆಯಾಗಿರಲಿಲ್ಲ, ಕೇಬಲ್ ಕೂಡ ಸಿಕ್ಕಿರಲಿಲ್ಲ.
ಈ ಮಧ್ಯೆ ಹರೀಶ್ ಎಂಬಾತ ಚೀಲದಲ್ಲಿ ತುಂಬಿಕೊಂಡು ಹೋಗ್ತಾ ಇರೋದನ್ನು ಕಂಡು ಅನುಮಾನಗೊಂಡ ಗ್ರಾಮಸ್ಥರು ಏನು ಎಂದು ವಿಚಾರಿಸಿದ್ದಾರೆ. ಆದರೆ ಚೀಲದಲ್ಲಿ ಸೀರೆ ಇದೆ ಎಂದು ಹೇಳಿದ್ದಾನೆ. ಬಳಿಕ ಚೀಲ ಇಳಿಸಿ ಸುರಿದಾಗ ಕೇಬಲ್ ವೈರ್ ಇರೋದು ಪತ್ತೆಯಾಗಿದೆ. ಸುತ್ತಮುತ್ತಲ ಗ್ರಾಮಗಳಲ್ಲಿ ಈತನೇ ಕೇಬಲ್ ವೈರ್ ಕದ್ದಿರೋದು ತಿಳಿದು ಬಂದಿದ್ದು ಯುವಕನನ್ನು ಕೇಬಲ್ ವೈರ್‌ನಿಂದಲೇ ಕಟ್ಟಿ ಹಾಕಿ, ಪೊಲೀಸರಿಗೆ ಕೇಬಲ್ ವೈರ್ ಸಮೇತ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಹರೀಶ್‌ನನ್ನು ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.