ಉತ್ತರ ಕನ್ನಡ:
ಶಿವರಾತ್ರಿ ಹಬ್ಬಕ್ಕೆಂದು ಮನೆಗೆ ಬಂದಿದ್ದ ಮಗಳು, ಅಳಿಯನಿಗೆ ಚಾಕು ಇರಿದ ತಂದೆ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದಾಸನಕೊಪ್ಪ ರಂಗಾಪುರದಲ್ಲಿ ಬುಧವಾರ ನಡೆದಿದೆ.
ಶಂಕರ ಹನುಮಂತ ಕಮ್ಮಾರ ಬದನಗೋಡು (53) ಎಂಬುವರು ಶಿವರಾತ್ರಿ ಹಬ್ಬಕ್ಕೆಂದು ಮನೆಗೆ ಬಂದಿದ್ದ ಮಗಳು ಕವನಾ ಹಾಗೂ ಅಳಿಯನಾದ ಮನೋಜ ಕಮಾಟಿ ಮೇಲೆ ಚಾಕು ಇರಿದು ಹಲ್ಲೆ ಮಾಡಿದ್ದಾರೆ, ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಗಳು ಕವನಾ ಗರ್ಭಿಣಿಯಾಗಿದ್ದು ಚಾಕು ಇರಿದ ಪರಿಣಾಮ ಗಾಯಗೊಂಡಿದ್ದ ಕವನಾ ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ತಂದೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಳಿಯ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಈ ಘಟನೆಗೆ ಮಗಳು ಕುಟುಂಬಕ್ಕೆ ಇಷ್ಟವಿಲ್ಲದಿದ್ದರೂ ಮದುವೆಯಾಗಿದ್ದಳು ಎಂಬ ಕಾರಣಕ್ಕೆ ಹಲ್ಲೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಶಿರಸಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸಿಪಿಐ ಶಶಿಕಾಂತ ಅವರ ಮಾರ್ಗದರ್ಶನದಲ್ಲಿ ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ.