ಗುಬ್ಬಿ : ಗುಬ್ಬಿ ತಾಲೂಕಿನ ಪುರ ಗ್ರಾಮದಲ್ಲಿ 2021ರಲ್ಲಿ ನಡೆದಿದ್ದ ಹನುಮಂತ ಎಂಬ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, 4 ವರ್ಷಗಳ ನಂತರ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಆರೋಪಿಗಳಾದ ಪರಮೇಶ ಬಿನ್ ಸೀನಪ್ಪ (29) ಮತ್ತು ಆನಂದ ಬಿನ್ ಗಂಗಯ್ಯ (38), ಇಬ್ಬರೂ ಪುರ ಕಾಲೋನಿಯ ನಿವಾಸಿಗಳಾಗಿದ್ದು, ನ್ಯಾಯಾಲಯವು ಆರೋಪಿಗಳ ವಿರುದ್ಧ ಆರೋಪ ಸಾಬೀತು ಪಟ್ಟ ಹಿನ್ನೆಲೆಯಲ್ಲಿ ತೀವ್ರ ಶಿಕ್ಷೆ ವಿಧಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಬ್ಬಿ ಪೊಲೀಸ್ ಠಾಣೆಯಲ್ಲಿ 96/2021 ದಾಖಲೆ ಸಂಖ್ಯೆಯಡಿಯಲ್ಲಿ IPC ಸೆಕ್ಷನ್ 302 ರೆ/ವಿ 34 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಸರ್ಕಲ್ ಇನ್ಸ್‌ಪೆಕ್ಟರ್ ಎಫ್.ಕೆ. ನದಾಫ್ ಅವರು ಪ್ರಕರಣದ ಸುಧೀರ್ಘ ತನಿಖೆ ಕೈಗೊಂಡಿದ್ದರು. ಸಾಕ್ಷ್ಯಾಧಾರ ಸಂಗ್ರಹಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪಪತ್ರ ಸಲ್ಲಿಸಿದ್ದರು.
ಈ ಪ್ರಕರಣವು ತುಮಕೂರು ಜಿಲ್ಲಾ ಸತ್ರ (ಸೆಷನ್) ನ್ಯಾಯಾಲಯದಲ್ಲಿ ಸ್ಪೆಷಲ್ C.C. ನಂಬರ್ 25/2022 ಅಡಿಯಲ್ಲಿ ನಡೆದ ವಿಚಾರಣೆಯಲ್ಲಿ, ನ್ಯಾಯಾಲಯವು ಸಾಕ್ಷ್ಯಧಾರಗಳ ಆಧಾರದಲ್ಲಿ ಇಬ್ಬರು ಆರೋಪಿಗಳೂ ಹನುಮಂತನನ್ನು ಕೊಲೆ ಮಾಡಿರುವುದು ಸಾಬೀತಾದ ಹಿನ್ನಲೆಯಲ್ಲಿ, ನ್ಯಾಯಾಲಯ ಇಬ್ಬರಿಗೂ ಜೀವಾವಧಿ ಶಿಕ್ಷೆ ಹಾಗೂ ತಲಾ ₹1,00,000 ದಂಡ ವಿಧಿಸಿ ತೀರ್ಪು ನೀಡಿದೆ.
ಅದೇ ರೀತಿ, ಮೃತ ಹನುಮಂತನ ತಾಯಿಗೆ ತಲಾ ₹50,000 ಪರಿಹಾರವನ್ನು ನೀಡುವಂತೆ ಕೂಡ ನ್ಯಾಯಾಲಯ ಆದೇಶಿಸಿದೆ. ಈ ತೀರ್ಪು ಹನುಮಂತನ ಕುಟುಂಬಕ್ಕೆ ಕಾನೂನು ನ್ಯಾಯ ದೊರೆತಂತೆ ಮಾಡಿದೆ.