ತುಮಕೂರು :
ತುಮಕೂರು ನಗರ ಬೆಂಗಳೂರಿಗೆ ಸರಿ ಸಮಾನವಾಗಿ ಬೆಳೆಯುತ್ತಿರೋದರ ಜೊತೆಗೆ ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಏರಿಯಾ ಏರಿಯಾಗಳೇ ಗಬ್ಬೇದ್ದು ನಾರುವಂತಹ ಸ್ಥಿತಿ ನಿರ್ಮಾಣ ಆಗಿದೆ. ತುಮಕೂರು ಮಹಾನಗರ ಪಾಲಿಕೆ ಕಸದ ನಿರ್ವಹಣೆಯನ್ನು ಸರಿಯಾಗಿ ಮಾಡ್ತಾ ಇಲ್ವೋ ಅಥವಾ ಜನರ ನಿರ್ಲಕ್ಷ್ಯದಿಂದಲೋ ಕಸದ ಸಮಸ್ಯೆ ತಾಂಡವಾಡ್ತಾ ಇದ್ದು ಕಸದಿಂದ ಜನರಲ್ಲಿ ಸಾಂಕ್ರಾಮಿಕ ರೋಗ ಭೀತಿ ಹೆಚ್ಚಾಗಿದೆ.
ನಗರದ ಉಪ್ಪಾರಹಳ್ಳಿ ವಾರ್ಡ್ ನಂಬರ್ 24ರ ರಸ್ತೆ ಬದಿ ಎಲ್ಲೆಂದರಲ್ಲಿ ಕಸವನ್ನು ಎಸೆಯಲಾಗಿದ್ದು, ಇಡೀ ಏರಿಯಾನೇ ಗಬ್ಬೇದು ನಾರುತ್ತಿದೆ. ಇದರಿಂದ ನಾಗರೀಕರು ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ ಜೊತೆಗೆ ರೋಗ ಹತ್ತಿಸಿಕೊಳ್ಳೋ ಭೀತಿಯಲ್ಲಿ ಅಲ್ಲಿನ ನಿವಾಸಿಗಳಿದ್ದಾರೆ. ಸುಮಾರು ದಿನಗಳಿಂದ ಕಸ ಅಲ್ಲಿಯೇ ಬಿದ್ದು ಕೊಳೆಯುತ್ತಿದ್ದು ನಾಯಿ- ಹಂದಿಗಳ ಕಾಟ ಹೆಚ್ಚಾಗಿದೆ. ಕಸವನ್ನು ನಾಯಿ ಹಾಗೂ ಹಂದಿಗಳು ಎಳೆದಾಡುತ್ತಿದ್ದು ರಸ್ತೆಯಲ್ಲಿ ಓಡಾಡುವವರ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಿವೆ. ಇದರಿಂದ ರಾತ್ರಿ ವೇಳೆ ನಾಯಿಗಳು ಕಚ್ಚುವ ಭೀತಿಯಲ್ಲಿಯೇ ಜನರು ಓಡಾಟ ನಡೆಸುತ್ತಿದ್ದಾರೆ.
ಇನ್ನು ಕಸದ ರಾಶಿಗೆ ಹಸುಗಳು ಕೂಡ ಮುಗಿ ಬೀಳ್ತಾ ಇದ್ದು, ಕಸದಲ್ಲಿದ್ದ ಪ್ಲ್ಯಾಸ್ಟಿಕ್ ಹಸುಗಳ ಹೊಟ್ಟೆ ಸೇರುತ್ತಿದೆ. ಇದರಿಂದ ಹಸುಗಳ ಪ್ರಾಣಕ್ಕೆ ಕುತ್ತು ತರುವಂತಾಗಿದೆ. ರಾಶಿ ರಾಶಿ ಕಸ ಬಿದ್ದಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ. ಕಸದ ಗಾಡಿಗಳು ಬಂದರೂ ಕೂಡ ಸಿಬ್ಬಂದಿ ಕಸವನ್ನು ಎತ್ತುವ ಕೆಲಸ ಮಾತ್ರ ಮಾಡ್ತಾ ಇಲ್ಲ, ಇದು ಕಸದ ಸಮಸ್ಯೆಗೆ ಪ್ರಮುಖ ಕಾರಣವಾಗಿದೆ. ಅಲ್ಲದೇ ಎರಡು ದಿನಗಳಿಗೊಮ್ಮೆ ಕಸದ ಗಾಡಿಗಳು ಪ್ರತಿ ಏರಿಯಾದಲ್ಲೂ ಸಂಚಾರ ಮಾಡ್ತಾ ಇದ್ದು ಕಸವನ್ನು ಹಾಕಲು ಜನರು ನಿರ್ಲಕ್ಷ್ಯ ತೋರಿ, ರಸ್ತೆ ಬದಿ ಬಂದು ಕಸವನ್ನು ಸುರಿದು ಹೋಗ್ತಾ ಇರೋದರಿಂದ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇದ್ದು, ಇನ್ನು ಸ್ವಲ್ಪ ದಿನಗಳಲ್ಲಿ ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟೆಇಗೆ ಸೇರುವ ಸನಿಹದಲ್ಲಿದೆ ನಮ್ಮ ಹೆಮ್ಮೆಯ ತುಮಕೂರು.
ಇನ್ನಾದರೂ ಅಧಿಕಾರಿಗಳು, ಪಾಲಿಕೆ ಸಿಬ್ಬಂದಿ ಎಚ್ಚೆತ್ತುಕೊಂಡು ಕಸದ ಸಮಸ್ಯೆಗೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಕಸದ ಸಮಸ್ಯೆಗೆ ಮುಕ್ತಿ ಕೊಡಿಸಬೇಕಿದೆ. ಕಸದ ರಾಶಿ ಇರುವ ಕಡೆ ಕಸ ಎತ್ತುವುದರ ಜೊತೆಗೆ ಕಸ ಎಸೆಯುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕಿದೆ.