ತುಮಕೂರು :
ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ತುಮಕೂರು ಆರ್ ಟಿಓ ಅಧಿಕಾರಿಗಳು ಬಿಗ್ ಆಪರೇಷನ್ ನಡೆಸಿದ್ದು, ಬರೋಬ್ಬರಿ ಒಂದು ವರ್ಷದಿಂದ ಎಫ್‌ಸಿ ಕೂಡ ಇಲ್ಲದೇ, ಟ್ಯಾಕ್ಸ್ ಕೂಡ ಕಟ್ಟದೇ ಓಡಾಡುತ್ತಿದ್ದ ಖಾಸಗಿ ಬಸ್ ಅನ್ನು ಸೀಜ್ ಮಾಡಿದ್ದಾರೆ.
ತುಮಕೂರು ಆರ್ ಟಿಓ ಇನ್ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ನಿನ್ನೆ ಕುಣಿಗಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಯಿತು. ಈ ಕಾರ್ಯಾಚರಣೆಯ ವೇಳೆ, ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರಯಾಣಿಸುತ್ತಿದ್ದ ನಂದಿನಿ ಎಂಬ ಖಾಸಗಿ ಬಸ್ ಪರವಾನಗಿ ದಾಖಲೆಗಳಿಲ್ಲದೆ ಓಡಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಬಸ್ ಕಳೆದ ಒಂದು ವರ್ಷದಿಂದ ಯಾವುದೇ ಎಫ್‌ಸಿ ತಪಾಸಣೆ ಮಾಡಿಸದೇ ಹಾಗೂ ಟ್ಯಾಕ್ಸ್ ಪಾವತಿಸದೇ ಸಂಚರಿಸುತ್ತಿತ್ತು. ಹೀಗಾಗಿ ಆರ್‌ಟಿಸಿ ಅಧಿಕಾರಿಗಳು ಈ ಖಾಸಗಿ ಬಸ್ ಅನ್ನು ಸೀಜ್ ಮಾಡಿ, ಬಸ್ ಚಾಲಕ ಮತ್ತು ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.
ಇನ್ನು ಈ ವೇಳೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ಅವರನ್ನು ಸುರಕ್ಷಿತವಾಗಿ ತಲುಪಬೇಕಾದ ಸ್ಥಳಗಳಿಗೆ ರವಾನಿಸಲಾಗಿದೆ. ಸದ್ಯ ಆರ್ ಟಿಓ ಅಧಿಕಾರಿಗಳು ಬಸ್ ಅನ್ನು ವಶಕ್ಕೆ ಪಡೆದಿದ್ದು, ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.