ತುಮಕೂರು:
ಇತ್ತೀಚಿನ ದಿನಗಳಲ್ಲಿ KSRTC ಬಸ್‌ಗಳ ಯಮಸ್ವರೂಪಿಯಾಗ್ತಿದ್ದು, ದಿನೇದಿನೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದ 15 ದಿನಗಳ ಅಂತರದಲ್ಲಿ ತುಮಕೂರಿನಲ್ಲಿಯೇ KSRTC ಬಸ್ ಚಾಲಕನ ಅಜಾಗರೂಕತೆ ಪ್ರಕರಣಗಳು ವರದಿಯಾಗಿದೆ. ನಗರದ ಟೌನ್‌ಹಾಲ್ ಸರ್ಕಲ್ ಬಳಿ ಕೆಎಸ್‌ಆರ್‌ಟಿಸಿ ಬಸ್ ಚಾಲಕನ ಅಜಾಗರೂಕತೆಯಿಂದ ಮಹಿಳೆ ಮೇಲೆ ಬಸ್ ಹರಿದಿದ್ದು, ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದಳು.. ಈ ಘಟನೆ ಮಾಸುವ ಮುನ್ನವೇ ತುಮಕೂರಿನ ಕ್ಯಾತ್ಸಂದ್ರ ಟೋಲ್ ಬಳಿ KSRTC ಬಸ್ ಮತ್ತೊಂದು ಭೀಕರ ಅಪಘಾತಕ್ಕೀಡಾಗಿದೆ. ಹೌದು ಬೆಳ್ಳಂ ಬೆಳಿಗ್ಗೆ ಕ್ಯಾತ್ಸಂದ್ರ ಟೋಲ್ ಬಳಿ ಬಳ್ಳಾರಿಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ KSRTC ಬಸ್, ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಅಪಘಾತ ಸಂಭವಿಸಿದ್ದು, ಪ್ರಯಾಣಿಕರು ಪ್ರಾಣಪಾಯದಿಂದ ಜಸ್ಟ್ ಮಿಸ್ ಆಗಿದ್ದಾರೆ.
ಲಾರಿಯನ್ನು ಓವರ್‌ಟೇಕ್ ಮಾಡಲು ಹೋಗಿ ಲಾರಿಗೆ ಬಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ, ಭತ್ತದ ಹೊಟ್ಟು ತುಂಬಿದ್ದ ಲಾರಿಯಾಗಿದ್ದರಿಂದ ಭಾರೀ ಅನಾಹುತ ಆಗುವುದು ತಪ್ಪಿದೆ. ಇನ್ನು ಡಿಕ್ಕಿಯ ರಭಸಕ್ಕೆ KSRTC ಬಸ್‌ನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಬಸ್‌ನಲ್ಲಿದ್ದ 15 ಮಂದಿಗೆ ಗಾಯಗಳಾಗಿದ್ದು ಕೂಡಲೇ ಆಂಬುಲೆನ್ಸ್ ಮೂಲಕ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. KSRTC ಬಸ್ ಚಾಲಕನ ಅತೀವೇಗ ಮತ್ತು ಅಜಾಗರೂಕತೆ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಕ್ಯಾತ್ಸಂದ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಇತ್ತೀಚಿನ ದಿನಗಳಲ್ಲಿ ತುಮಕೂರು ಹೆದ್ದಾರಿಗಳಲ್ಲಿ ನಿರಂತರ ಅಪಘಾತಗಳು ವರದಿಯಾಗ್ತಿದ್ದು, ರಸ್ತೆ ಸುರಕ್ಷತೆ, ಚಾಲಕರ ಸಂಚಾರ ನಿಯಮ ಪಾಲನೆ ಹಾಗೂ ಅತೀವೇಗದ ನಿಯಂತ್ರಣ ಕುರಿತು ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕಿದೆ.