ಚಿಕ್ಕಬಳ್ಳಾಪುರ :
ರಂಜಾನ್ ಹಬ್ಬಕ್ಕೆಂದು ಸಂಬಂಧಿಕರ ಮನೆಗೆ ಬಂದಿದ್ದ ಕುಟುಂಬವೊಂದು ವಿಧಿಯಾಟಕ್ಕೆ ಮಸಣಕ್ಕೆ ಸೇರಿದ್ದಾರೆ. ಹೌದು ಕೆರೆಯ ವೀಕ್ಷಣೆಗೆಂದು ಹೋಗಿದ್ದವರು ಸಾವಿನ ದಡ ಸೇರಿದ್ದಾರೆ. ಹೆತ್ತವರನ್ನು ಕಳೆದುಕೊಂಡು ಮಕ್ಕಳು ಅನಾಥರಾದ ಧಾರುಣ ಘಟನೆಗೆ ಚಿಕ್ಕಬಳ್ಳಾಪುರ ಸಾಕ್ಷಿಯಾಗಿದೆ.
ದೇವನಹಳ್ಳಿ ಮೂಲದ ಇಮ್ರಾನ್, ಬಶೀರಾ, ಫರ್ಹಿನಾ ಸೇರಿದಂತೆ ಐದಾರು ಮಂದಿ ಮಕ್ಕಳೊಂದಿಗೆ ಕುಟುಂಬ ಸಮೇತ ರಂಜಾನ್ ಹಬ್ಬಕ್ಕೆಂದು ಚಿಕ್ಕಬಳ್ಳಾಪುರ ನಗರದ ಸಂಬಂಧಿಕರ ಮನೆಗೆ ಬಂದಿದ್ದರು. ಹಬ್ಬ ಮುಗಿಸಿಕೊಂಡು ದೇವನಹಳ್ಳಿಗೆ ವಾಪಸ್ ಆಗಬೇಕಿತ್ತು, ಅಷ್ಟರಲ್ಲಿ ಕುಟುಂಬ ಸಮೇತ ಶ್ರೀನಿವಾಸ ಸಾಗರ ಕೆರೆ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಕೆರೆಯ ಬಳಿ ಮಕ್ಕಳು ಆಟ ವಾಡ್ತಿದ್ದಾಗ ಮಗುವೊಂದು ನೀರಿನಲ್ಲಿ ಏಕಾಏಕಿ ಮುಳುಗಿದೆ. ತಕ್ಷಣ ಮಗುವನ್ನು ರಕ್ಷಿಸಲು ಇಮ್ರಾನ್ ಎಂಬಾತ ಮುಂದಾಗಿದ್ದಾನೆ, ಆದರೆ ಆತ ನೀರಿನಲ್ಲಿ ಮುಳುಗುತ್ತಿದ್ದನ್ನು ಕಂಡು ಬಷೀರಾ ಹಾಗೂ ಫರ್ಹಿನಾ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ವಿಧಿ ಎಷ್ಟು ಕ್ರೂರಿ ಎಂದರೆ ನೀರಿನಲ್ಲಿ ಮುಳುಗಿದ್ದ ಮಗು ಏನೋ ಬಚಾವ್ ಆಯ್ತು ಆದರೆ ಇಮ್ರಾನ್, ಬಷೀರಾ ಹಾಗೂ ಫರ್ಹಿನಾ ನೀರು ಪಾಲಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದೆ. ಆದರೆ ಅಷ್ಟರಲ್ಲಿ ಆಗಲೇ ಮೂವರ ಪ್ರಾಣಪಕ್ಷಿ ಹಾರಿಹೋಗಿತ್ತು. ಮೂವರ ಮೃತದೇಹವನ್ನು ಹೊರತೆಗೆಯಲಾಗಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಜಿಲ್ಲಾಸ್ಪತ್ರೆಯ ಬಳಿ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ತಮ್ಮ ತಂದೆ ತಾಯಿಯರಿಗೆ ಮಕ್ಕಳು ಸಿಪಿಆರ್ ನೀಡಲು ಮುಂದಾಗಿದ್ದು ಎಂತಹವರ ಕಣ್ಣಲ್ಲಿಯೂ ನೀರು ಬರಿಸುವಂತಿತ್ತು.
ಸ್ಥಳಕ್ಕೆ ಶಾಸಕ ಪ್ರದೀಪ್ ಈಶ್ವರ್ ಕೂಡ ಭೇಟಿ ನೀಡಿ, ಕುಟುಂಬಸ್ಥರಿಗೆ ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ. ಒಟ್ಟಿನಲ್ಲಿ ರಂಜಾನ್ ಹಬ್ಬಕ್ಕೆಂದು ಊರಿಗೆ ಬಂದವರು ವಿಧಿಯಾಟಕ್ಕೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದು ಎಲ್ಲರ ಕಣ್ಣಲ್ಲಿ ನೀರು ಬರಿಸುವಂತಾಗಿದೆ.