ತುಮಕೂರು :
ತುಮಕೂರು ನಗರ ಸ್ಮಾರ್ಟ್ ಸಿಟಿ ಆಗಿದ್ದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆ ಬದಿ ಕಸದ ನಿರ್ವಹಣೆಗಾಗಿ ಟ್ವಿನ್ ಬಿನ್‌ಗಳನ್ನು ಅಳವಡಿಸಲಾಗಿತ್ತು. ಹೌದು ಸುಮಾರು 29 ಲಕ್ಷ ರೂಪಾಯಿ ಅನುದಾನದಲ್ಲಿ ನಗರದ ಹಲವೆಡೆ ರಸ್ತೆಗಳಲ್ಲಿ ನೂರಾರು ಕಸದ ಬುಟ್ಟಿಗಳನ್ನು ಅಳವಡಿಕೆ ಮಾಡಲಾಗಿತ್ತು. ಆದರೆ ಈ ಕಸದ ಬುಟ್ಟಿಗಳು ಮಂಗಮಾಯವಾಗಿದ್ದು ಪ್ರಜಾಶಕ್ತಿ ಕ್ಯಾಮೆರಾಗಿ ಸಿಕ್ಕಿದೆ.
ಪ್ರತಿ ಟ್ವಿನ್‌ಬಿನ್‌ಗಳಿಗೆ ಸುಮಾರು 8 ರಿಂದ 9 ಸಾವಿರ ವ್ಯಯ ಮಾಡಿ ನೂರಾರು ಕಸದ ಬುಟ್ಟಿಗಳನ್ನು ಅಳವಡಿಸಲಾಗಿತ್ತು. ಆದರೆ ಡಿಸಿ ಕಚೇರಿಯಿಂದ ಹನುಮಂತಪುರದವರೆಗೆ ಅಳವಡಿಕೆ ಮಾಡಲಾಗಿದ್ದ ನೂರಾರು ಕಸದ ಬುಟ್ಟಿಗಳು ಮಂಗಮಾಯವಾಗಿವೆ. ಕಸದ ಬುಟ್ಟಿಗಳು ಮಾಯವಾಗಿದ್ದು ಕೇವಲ ಕಬ್ಬಿಣದ ಕಂಬಿಗಳು ಮಾತ್ರ ಉಳಿದಿವೆ. ಕಸದ ಬುಟ್ಟಿ ಇಲ್ಲದಿರೋದರಿಂದ ಸಾರ್ವಜನಿಕರು ಕಸವನ್ನು ರಸ್ತೆಯಲ್ಲೇ ಹಾಕುವಂತಹ ಸ್ಥಿತಿ ಇದ್ದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಕಸದ ಬುಟ್ಟಿ ಮಾಯವಾಗಲು ಹೇಗೆ ಸಾದ್ಯವಾಯಿತು ಎಂಬುದೇ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ರಾತ್ರೋ ರಾತ್ರಿ ಕಸದ ಬುಟ್ಟಿಗಳನ್ನು ಕಳ್ಳರು ಕದ್ದೋಗಿದ್ದಾರಾ ಎಂಬ ಅನುಮಾನ ಕೂಡ ಮೂಡಿದೆ. ಅದು ಒಂದಲ್ಲಾ ಎರಡಲ್ಲಾ ಹತ್ತಾರಾ ಕಸದ ಬುಟ್ಟಿಗಳು ಮಾಯವಾಗಿದ್ದು, ಕಸದ ಬುಟ್ಟಿಗಳ ಮಾಯವಾಗಿರೋದಕ್ಕೆ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಪ್ರಾಧಿಕಾರ ಸ್ಪಷ್ಟನೆ ನೀಡಬೇಕಿದೆ. ಇಲಾಖೆಯ ನಿರ್ಲಕ್ಷ್ಯದಿಂದಲೇ ಕಸದ ಬುಟ್ಟಿಗಳು ಮಾಯವಾಗಿದ್ಯಾ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ಮಾಡಬೇಕೆಂದು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಒಟ್ಟಿನಲ್ಲಿ ನಗರದ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಅಳವಡಿಕೆ ಮಾಡಲಾಗಿರೋ ಕಸದ ಬುಟ್ಟಿಗಳು ಕಾಣೆಯಾಗಿದ್ದು, ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲೇ ಎಸೆಯುವಂತಾಗಿದೆ. ಮೊದಲೇ ನಗರದಲ್ಲಿ ಕಸದ ಸಮಸ್ಯೆ ಎದುರಾಗಿದ್ದು, ಕಸದ ಬುಟ್ಟಿಗಳ ಮಾಯದಿಂದ ಮತ್ತಷ್ಟು ಕಸದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಲಾಗಿದ್ದ ಕಸದ ಬುಟ್ಟಿಗಳು ಮಾಯವಾಗಿರೋ ಬಗ್ಗೆ ಕ್ರಮ ಕೈಗೊಂಡು ನಗರದ ಸೌಂದರ್ಯವನ್ನು ಕಾಪಾಡಬೇಕಿದೆ.