ತುಮಕೂರು : ತುಮಕೂರಿನ ಮಂಡಿಪೇಟೆಯ ಜನರಿಗೆ ಕತ್ತಲೆ ಭಾಗ್ಯ

ತುಮಕೂರು :

ಮಂಡಿಪೇಟೆಯನ್ನು ತುಮಕೂರು ನಗರದ ಮಾರ್ಕೆಟಿಂಗ್‌ ಹಬ್‌ ಅಂತಾ ಕರೆದರೆ ತಪ್ಪಾಗೋದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿ ವ್ಯವಹಾರ ನಡೆಯುತ್ತೆ. ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತೆ.  ಬೆಳಗ್ಗೆಯಿಂದ ರಾತ್ರಿ ಅಂಗಡಿಗಳ ಬಾಗಿಲು ಬಂದ್‌ ಆಗೋವರೆಗೂ ಇಲ್ಲಿ ವಹಿವಾಟು ನಡೆಯುತ್ತಲೇ ಇರುತ್ತೆ. ಆದರೆ ಇದೀಗ ಈ ಮಂಡಿಪೇಟೆಯ ಜನರು ಕತ್ತಲು ಭಾಗ್ಯವನ್ನು ಅನುಭವಿಸುವಂತಾಗಿದೆ.

ಸಂಜೆಯಾಗ್ತಿದ್ದಂತೆ ಮಂಡಿಪೇಟೆ ಸಂಪೂರ್ಣ ಕತ್ತಲಿನಿಂದ ಕವಿದು ಹೋಗ್ತಿದೆ. ಕಾರಣ ಸ್ಮಾರ್ಟ್‌ ಸಿಟಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ. ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿ ವತಿಯಿಂದ ಟೆಂಡರ್‌ ಕರೆದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ ಕಳೆದ ಹದಿನೈದು ದಿನಗಳಿಂದ ಇಡೀ ಮಂಡಿಪೇಟೆಯಲ್ಲಿ ಒಂದೇ ಒಂದು ಬೀದಿದೀಪ ಕೂಡ ಆನ್‌ ಆಗ್ತಿಲ್ಲ. ಹೀಗಾಗಿ ಇಲ್ಲಿ ಬರೋ ಜನರು ಕತ್ತಲಿನಲ್ಲಿಯೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಡೀ ಏರಿಯಾಗೆ ಏರಿಯಾವೇ ಕತ್ತಲು ಕವಿದು ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗ್ತಿದ್ದು, ಜನರು ಇಲ್ಲಿ ಬರೋದಕ್ಕೇ ಭಯಪಡುವಂತಾಗಿದೆ. ಹೀಗಾಗಿ ವ್ಯಾಪಾರ ಕೂಡ ಕಡಿಮೆಯಾಗಿದೆಯಂತೆ. ಈ ಬಗ್ಗೆ ಅಲ್ಲಿನ ಸ್ಥಳೀಯರು, ವ್ಯಾಪಾರಸ್ಥರು ಪಾಲಿಕೆಗೆ ಎಷ್ಟೇ ಬಾರಿ ದೂರು ನೀಡಿದರೂ ಅನ್ನುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. 

ಒಂದು ಕಡೆ ಬೀದಿ ದೀಪಗಳು ಆನ್‌ ಆಗ್ತಿಲ್ಲ. ಇನ್ನೊಂದು ಕಡೆ ಸರ್ಕಲ್‌ ನಲ್ಲಿರುವ ಹೈ ಬೀಮ್ ಲೈಟ್‌ ಕೂಡ ಉರಿಯುತ್ತಿಲ್ಲ. ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳ ವ್ಯವಹಾರ ನಡೆಯೋ ಸ್ಥಳದಲ್ಲಿ ಸ್ಮಾರ್ಟ್‌ ಸಿಟಿ ವತಿಯಿಂದ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಎಲ್‌ ಇಡಿ ಲೈಟ್‌ಗಳನ್ನು ಹಾಕಿಸಲಾಗಿತ್ತು. ಆದರೆ ಈ ಲೈಟ್‌ಗಳು ಆನ್‌ ಆಗದೇ ಇರೋದರಿಂದ ಇಲ್ಲಿನ ವ್ಯಾಪಾರಿಗಳು ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

ಇನ್ನು ಮೊನ್ನೆಯಷ್ಟೇ ಇದೇ ಮಂಡಿಪೇಟೆಯಲ್ಲಿ ಕಳ್ಳರು ಜೋರು ಮಳೆಯಿದ್ದ ವೇಳೆ 4 ಅಂಗಡಿಗಳಿಗೆ ಕನ್ನ ಹಾಕಿ ಕೈಗೆ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಮತ್ತೊಂದೆಡೆ ಡ್ರೈಫ್ರೂಟ್ಸ್‌ ಅಂಗಡಿಯಲ್ಲಿದ್ದ ಯಾಲಕ್ಕಿ ಸೇರಿದಂತೆ ಇನ್ನಿತರ ಡ್ರೈಪ್ರೂಟ್ಸ್‌ಗಳನ್ನು ಮೂಟೆಗಟ್ಟಲೇ ತುಂಬಿಕೊಂಡು ಎಸ್ಕೇಪ್‌ ಆಗಿದ್ದರು. ಆದರೆ ಇಷ್ಟೆಲ್ಲಾ ಆದರೂ ಈ ಪ್ರಮುಖ ವ್ಯಾಪಾರಿ ಜಾಗದಲ್ಲಿ ಬೀದಿ ದೀಪಗಳನ್ನು ಸರಿಪಡಿಸದೇ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರೋದಕ್ಕೆ ವ್ಯಾಪಾರಸ್ಥರು ಅಧಿಕಾರಿಗಳ ವಿರುದ್ಧ ಸಿಟ್ಟಾಗಿದ್ದಾರೆ.

ಅದೇನೇ ಇರಲಿ ಪಾಲಿಕೆಗೆ ಹೆಚ್ಚಿನ ಆದಾಯ ತಂದು ಕೊಡುವ ಮಂಡಿಪೇಟೆಯಲ್ಲಿಯೇ ಇಂತಹ ಸ್ಥಿತಿ ಇರೋದು ವಿಪರ್ಯಾಸವೇ ಸರಿ. ಇನ್ನು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಾತ್ರಿ 11 ಗಂಟೆಯವರೆಗೂ ನಡೆಯುತ್ತಿದ್ದ ವ್ಯಾಪಾರ ಈಗ 8 ಗಂಟೆ ಇಲ್ಲವೇ 9 ಗಂಟೆಗೆ ಮುಗಿದು ಹೋಗ್ತಿದೆಯಂತೆ. ಗ್ರಾಹಕರು ಬಾರದೇ ಇರೋದರಿಂದ ಅಂಗಡಿ ಮಾಲೀಕರು ಬೇಗನೇ ಅಂಗಡಿ ಬಾಗಿಲುಗಳನ್ನು ಮುಚ್ಚಿಹೋಗು ವಂತಾಗಿದೆಯಂತೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕಾಗಿದೆ.

Author:

...
Sushmitha N

Copy Editor

prajashakthi tv

share
No Reviews