ತುಮಕೂರು : ತುಮಕೂರು ಮಹಾನಗರ ಪಾಲಿಕೆಯಲ್ಲಿ ನಡೆಯಿತಾ ಕೋಟ್ಯಾಂತರ ರೂಪಾಯಿ ಹಗರಣ?

ತುಮಕೂರು:

ತುಮಕೂರು ನಗರ ನಗರಸಭೆಯಿಂದ ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿ ದಶಕವೇ ಕಳೆದುಹೋಗಿದೆ. ಮಹಾನಗರ ಪಾಲಿಕೆಯಾಗಿ ಬದಲಾದ ನಂತರ ನಗರಕ್ಕೆ ಕೋಟಿ ಕೋಟಿ ಅನುದಾನ ಕೂಡ ಹರಿದುಬರ್ತಿದೆ. ಇತ್ತ ಪಾಲಿಕೆಯ ಖಜಾನೆ ದೊಡ್ಡದಾಗ್ತಿದ್ದ ಹಾಗೆಯೇ, ಅತ್ತ ಈ ಖಜಾನೆಯನ್ನು ಕೊಳ್ಳೆಹೊಡೆದು ತಮ್ಮ ಜೇಬನ್ನು ತುಂಬಿಸಿಕೊಳ್ಳಬೇಕು ಅನ್ನೋ ಖದೀಮರ ಕಾಟ ಕೂಡ ಹೆಚ್ಚುತ್ತಿದೆ. ಇದೀಗ ಇಂಥದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದ್ದು, ತುಮಕೂರು ಮಹಾನಗರ ಪಾಲಿಕೆಗೆ ಖಾಸಗಿ ಕಂಪನಿಯೊಂದು ಬರೋಬ್ಬರಿ ೩ ಕೋಟಿ ರೂಪಾಯಿ ಪಂಗನಾಮ ಇಟ್ಟಿದೆ ಅನ್ನೋ ಆರೋಪ ಕೇಳಿಬಂದಿದೆ.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಕೋಟ್ಯಂತರ ರೂಪಾಯಿ ಹಗರಣ ನಡೆದಿರುವ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಪಾಲಿಕೆಯಲ್ಲಿ ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯೇ ಪಾಲಿಕೆಗೆ ಹೀಗೆ ತಿರುಪತಿ ನಾಮ ಇಟ್ಟಿದೆಯಂತೆ. ಈ ಲೂಟಿಕೋರರು ಕಸ ಸಂಗ್ರಹಿಸುವ ಆಟೋ ಚಾಲಕರು ಮತ್ತು ಪೌರಕಾರ್ಮಿಕರನ್ನು ಕೂಡ ಬಿಟ್ಟಿಲ್ಲವಂತೆ. ದಿನಬೆಳಗಾದರೆ ಕಸ ಸಂಗ್ರಹಿಸುತ್ತಾ ನಗರವನ್ನು ಸ್ವಚ್ಛವಾಗಿಡುವ ಕಸದ ಆಟೋ ಚಾಲಕರು ಮತ್ತು ಪೌರಕಾರ್ಮಿಕರು ಹೆಸರಿನಲ್ಲಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ೩ ಕೋಟಿ ರೂಪಾಯಿಯನ್ನು ಮಹಾನಗರ ಪಾಲಿಕೆಯ ಬೊಕ್ಕಸಕ್ಕೆ ವಂಚಿಸಿದ್ದಾರಂತೆ. ಅಧಿಕಾರಿಗಳ ಸಹಕಾರ ಇಲ್ಲದೇ ಇದೆಲ್ಲಾ ನಡೆಯೋದಕ್ಕೆ ಸಾಧ್ಯನಾ? ಹೀಗಾಗಿ ಈ ಮಹಾ ಹಗರಣದ ಹಿಂದೆ ಪಾಲಿಕೆಯ ಕೆಲ ಅಧಿಕಾರಿಗಳು ಕೂಡ ಶಾಮೀಲಾಗಿದ್ದಾರೆ ಎಂಬ ಗುಮಾನಿ ಎದ್ದಿದೆ.

ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಸ ವಿಲೇವಾರಿ ಮಾಡಲು ಗುತ್ತಿಗೆ ಪಡೆದಿರುವ ಶ್ರೀ ಗಣೇಶ್ ಶಂಕರ್‌ ಎನ್ವಿರಾನ್ಮೆಂಟಲ್‌ ಸಲ್ಯೂಷನ್ಸ್‌ ಪ್ರೈವೇಟ್ ಲಿಮಿಟೆಡ್ ಕಂಪನಿಯ ವಿರುದ್ಧ ಇಂಥದ್ದೊಂದು ಗಂಭೀರ ಆರೋಪ ಕೇಳಿಬಂದಿದೆ. ನಗರದಲ್ಲಿ ಮನೆಮನೆಗೆ ಹೋಗಿ ಕಸ ಸಂಗ್ರಹಣೆ ಮಾಡುವ ಸಲುವಾಗಿ ಅಗತ್ಯ ಮಾನವ ಸಂಪನ್ಮೂಲವನ್ನು ಒದಗಿಸಲು ಈ ಗುತ್ತಿಗೆಯನ್ನು ನೀಡಲಾಗಿದೆ. ಈ ಗುತ್ತಿಗೆಗಾಗಿ ಪಾಲಿಕೆ ಒಟ್ಟು ಮೂರು ಕಾರ್ಯಾದೇಶವನ್ನು ಹೊರಡಿಸಿದ್ದು, ತಿಂಗಳಿಗೆ ಸರಿಸುಮಾರು ೭೩ ಲಕ್ಷ ರೂಪಾಯಿಯನ್ನು ನೀಡಬೇಕಿತ್ತು. ಆದರೆ ಪಾಲಿಕೆಯಿಂದ ಪ್ರತಿ ತಿಂಗಳು ಈ ಕಂಪನಿಗೆ ೯೭ ಲಕ್ಷ ರೂಪಾಯಿಯನ್ನು ಪಾವತಿಸಲಾಗುತ್ತಿದೆಯಂತೆ. ಈ ಮೂಲಕ ಪ್ರತೀ ತಿಂಗಳು ೧೫ ರಿಂದ ೨೦ ಲಕ್ಷ ರೂಪಾಯಿಯನ್ನು ಹೆಚ್ಚುವರಿಯಾಗಿ ಪಾವತಿಸಲಾಗುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ.

ಇನ್ನು ಸಾಮಾನ್ಯವಾಗಿ ಪಾಲಿಕೆಯಲ್ಲಿ ಯಾವುದೇ ಗುತ್ತಿಗೆ ಇದ್ದರೂ ಪ್ರತಿ ವರ್ಷವೂ ಹೊಸ ಟೆಂಡರ್‌ ಪ್ರಕ್ರಿಯೆ ನಡೆಯಬೇಕು. ಆದರೆ ೨೦೨೨ ರಿಂದ ಇಲ್ಲಿಯವರೆಗೆ ಇದೇ ಕಂಪನಿಗೆ ಗುತ್ತಿಗೆ ನೀಡಲಾಗ್ತಿದೆಯಂತೆ. ಹೀಗಾಗಿ ಒಟ್ಟು ಮೂರು ವರ್ಷಗಳಲ್ಲಿ ಮೂರು ಕೋಟಿ ರೂಪಾಯಿಗೂ ಅಧಿಕ ಫ್ರಾಡ್‌ ನಡೆದಿದೆ, ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿಯನ್ನು ವಂಚಿಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಇನ್ನು ಜಿಲ್ಲಾಧಿಕಾರಿ ಆದೇಶವನ್ನು ಕೂಡ ಮೀರಿ ಪ್ರತಿ ತಿಂಗಳು ಹೆಚ್ಚುವರಿ ಬಿಲ್ ಅನ್ನು ಪಾಲಿಕೆಗೆ ಸಲ್ಲಿಸಿ ವಂಚಿಸಿರುವ ಶ್ರೀ ಗಣೇಶ್ ಶಂಕರ್ ಎನ್ವಿರಾನ್ಸೆಂಟ್ ಸಲ್ಯೂಷನ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಸೂಕ್ತ ಕ್ರಮ ಕೈಗೊಂಡು ತುರ್ತಾಗಿ ವರದಿ ಸಲ್ಲಿಸುವಂತೆ ರಾಜ್ಯ ಕರ್ಮಚಾರಿಗಳ ಆಯೋಗ ಮಹಾನಗರ ಪಾಲಿಕೆಗೆ ತಾಕೀತು ಕೂಡ ಮಾಡಿದೆಯಂತೆ.

ಇನ್ನು ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜಾ ಅವರು ಕೂಡ ಪ್ರತಿಕ್ರಿಯೆಯನ್ನು ನೀಡಿದ್ದು, ಇದು ಹಳೆಯ ಪ್ರಕರಣವಾಗಿದ್ದು, ಒಂದು ತಿಂಗಳೊಳಗಾಗಿ ಪ್ರಕರಣ ಇತ್ಯರ್ಥಗೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಈ ಖಾಸಗಿ ಕಂಪನಿ ತುಮಕೂರು ಮಹಾನಗರ ಪಾಲಿಕೆಗೆ ಮಾನವ ಸಂಪನ್ಮೂಲ ಒದಗಿಸುತ್ತಿದ್ದು, ಕಸದಲ್ಲೇ ʼರಸʼ ತೆಗೆಯುವುದರಲ್ಲಿ ಎತ್ತಿದ ಕೈ ಆಗಿದೆ ಅನ್ನೋ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ. ಜೊತೆಗೆ ಇದರ ಹಿಂದೆ ಕೆಲವು ಮಾನಗೆಟ್ಟ ಭ್ರಷ್ಟ ಅಧಿಕಾರಿಗಳ ಕೈವಾಡ ಕೂಡ ಇರುವ ಸಾಧ್ಯತೆಯಿದ್ದು, ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗಬೇಕಿದೆ. ವಂಚನೆ ಸಾಬೀತಾಗಿದ್ದೇ ಹೌದಾದಲ್ಲಿ, ಪಾಲಿಕೆಯಿಂದ ಹೆಚ್ಚುವರಿ ಪಾವತಿಯಾಗಿರೋ ಹಣವನ್ನು ಕೂಡ ರಿಕವರಿ ಮಾಡಿಕೊಳ್ಳಬೇಕಿದೆ.

Author:

...
Editor

ManyaSoft Admin

Ads in Post
share
No Reviews