ತುಮಕೂರು : ಬೀದಿಬದಿ ವ್ಯಾಪಾರಸ್ಥನ ಮಗ ಈಗ ಖಡಕ್ ಪೊಲೀಸ್ | ಸೇವೆಗೆ ಸೇರಿ ನಾಲ್ಕೇ ವರ್ಷದಲ್ಲಿ ಸಿಗ್ತು ಸಿಎಂ ಪದಕ

ತುಮಕೂರು :

ತುಮಕೂರಿನ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೊಹಮದ್‌ ಖಲಂದರ್‌ ಅವರಿಗೆ ೨೭ ವರ್ಷ ವಯಸಾಗಿದ್ದು. ೨೦೨೦ರಲ್ಲಿ ಸೇವೆಗೆ ಸೇರಿದ್ದ ಇವರು ನಾಲ್ಕೇ ವರ್ಷದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದುಕೊಂಡು ತುಮಕೂರಿಗೆ ಹೆಮ್ಮೆ ತಂದಿದ್ದಾರೆ.

ಮೂಲತಃ ತುಮಕೂರಿನವರೇ ಆದ ಮೊಹಮದ್‌ ಖಲಂದರ್‌ ಅವರ ತಂದೆಯ ಹೆಸರು ಮುಹೀಬ್‌ ಅಂತಾ. ತಾಯಿಯ ಹೆಸರು ಸಫುರಾಬಿ. ತಂದೆ ಮುಹೀಬ್‌ ಅವರು ಬೀದಿಬದಿ ವ್ಯಾಪಾರಸ್ಥರಾಗಿದ್ದು, ಸುಮಾರು ೩೦-೪೦ ವರ್ಷಗಳಿಂದ ತುಮಕೂರಿನ ಮಂಡಿಪೇಟೆಯಲ್ಲಿ ಹಳದಿ ಕುಂಕುಮವನ್ನು ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ ಮಗ ಮೊಹಮದ್‌ ಖಲಂದರ್‌ ಇದೀಗ ತಮ್ಮ ತಂದೆ ತಾಯಿ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ.

ತುಮಕೂರಿನ ಸಿಇಎನ್‌ ಪೊಲೀಸ್‌ ಠಾಣೆಗೆ ಬರೋದಕ್ಕೂ ಮುನ್ನ ಮೊಹಮದ್‌ ಖಲಂದರ್‌ ಅವರು ಗುಬ್ಬಿ ತಾಲೂಕಿನ ಸಿ.ಎಸ್‌.ಪುರ ಪೊಲೀಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾ ಇದ್ದರು. ಈ ವೇಳೆ ಹಲವು ಮಹತ್ವದ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಪ್ರಮುಖವಾಗಿ ಕಳೆದ ವರ್ಷ ಕೆ.ಜಿ.ಟೆಂಪಲ್‌ನಲ್ಲಿ ನಡೆದ ಜ್ಯುವೆಲ್ಲರಿಗಳ ಸರಣಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಮೊಹಮದ್‌ ಖಲಂದರ್‌ ಪ್ರಮುಖ ಪಾತ್ರವಹಿಸಿದರು. ಜೊತೆಗೆ ಸಿ.ಎಸ್‌.ಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಮಂಚೇಹಳ್ಳಿ ನಡೆದಿದ್ದ ಕೊಲೆ ಪ್ರಕರಣವನ್ನು ೨ ವರ್ಷದ ಬಳಿಕ ಭೇದಿಸಲಾಗಿತ್ತು. ಇದರಲ್ಲಿಯೂ ಖಲಂದರ್‌ ಭಾಗಿಯಾಗಿದ್ದರು. ಇನ್ನು ಅವರೇಹಳ್ಳಿ ಗ್ರಾಮದಲ್ಲಿ ಯುವಕನೊಬ್ಬ ಪೆಟ್ರೋಲ್‌ ಬಾಂಬ್‌ ಸಿಡಿಸುವುದಾಗಿ ಆತಂಕ ಸೃಷ್ಟಿಸಿದ್ದ ಸಂದರ್ಭದಲ್ಲಿ ಈ ಗ್ರಾಮದಲ್ಲಿ ಎಕ್ಸ್‌ಕ್ಲೂಸಿವ್‌ ಆಕ್ಟ್‌ ಜಾರಿಯಾಗಿತ್ತು. ಇದನ್ನು ಕೂಡ ಸಮರ್ಥವಾಗಿ ನಿಭಾಯಿಸಲಾಗಿತ್ತು. ಇದೆಲ್ಲದರ ಹಿನ್ನೆಲೆಯಲ್ಲಿ ಮೊಹಮದ್‌ ಖಲಂದರ್‌ ಅವರು ಸದ್ಯ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಒಟ್ಟಿನಲ್ಲಿ ಬೀದಿಬದಿ ವ್ಯಾಪಾರಸ್ಥರ ಮಗ ಇದೀಗ ಖಡಕ್‌ ಪೊಲೀಸ್‌ ಆಗಿ ಕೆಲಸ ಮಾಡ್ತಿದ್ದು, ಇದೀಗ ಸೇವೆಗೆ ಸೇರಿ ನಾಲ್ಕೇ ವರ್ಷದಲ್ಲಿ ಮುಖ್ಯಮಂತ್ರಿಗಳ ಚಿನ್ನದ ಪದಕವನ್ನು ಪಡೆದುಕೊಂಡಿರೋದು ಮಾತ್ರ ಅಭಿನಂದನಾರ್ಹ.

Author:

...
Editor

ManyaSoft Admin

share
No Reviews