ತುಮಕೂರು :
ಕರುನಾಡಿನ ಯುವರತ್ನ. ಕನ್ನಡಿಗರ ರಾಜರತ್ನ ಸರಳತೆಯ ಸಾಹುಕಾರ. ಕೋಟಿ ಕೋಟಿ ಜನರ ಮನಸ್ಸು ಗೆದ್ದಿರೋ ನಗುವಿನ ಒಡೆಯ ಅಭಿಮಾನಿಗಳ ಪಾಲಿನ ಅರಸು ಎಲ್ಲರ ಪಾಲಿನ ಪ್ರೀತಿಯ ಅಪ್ಪು. ಅಪ್ಪು ನಮ್ಮನ್ನೆಲ್ಲಾ ಅಗಲಿರಬಹುದು. ಆದರೆ ಜೊತೆಗಿರದ ಜೀವ ಎಂದೆಂದಿಗೂ ಜೀವಂತ ಅನ್ನೋ ಹಾಗೆಯೇ ಕೋಟ್ಯಂತರ ಜನರ ಹೃದಯದಲ್ಲಿ ನೆಲೆಸಿದ್ದಾರೆ. ಇಂದು ಸ್ಯಾಂಡಲ್ವುಡ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹುಟ್ಟಿದ ದಿನ. ಹೀಗಾಗಿ ಇವತ್ತು ಕರುನಾಡಿನಲ್ಲಿ ಮಾತ್ರವಲ್ಲ ದೇಶ, ವಿದೇಶದಲ್ಲಿಯೂ ಕರುನಾಡ ಯುವರತ್ನನ ಹುಟ್ಟುಹಬ್ಬವನ್ನ ಅತ್ಯಂತ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅದೇ ರೀತಿ ಕಲ್ಪತರು ನಾಡು ತುಮಕೂರಿನಲ್ಲಿಯೂ ಅಪ್ಪು ಅಭಿಮಾನಿಗಳು ಅತ್ಯಂತ ವಿಶೇಷವಾಗಿ ಅಪ್ಪು ಹುಟ್ಟುಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ರೋಗಿಗಳಿಗೆ ಹಾಗೂ ಮಕ್ಕಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಣೆ ಮಾಡಲಾಯಿತು. ತುಮಕೂರು ಜಿಲ್ಲಾಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣು ಹಂಪಲು, ಬ್ರೆಡ್ ವಿತರಿಸಿ ವಿಶೇಷವಾಗಿ ಅಪ್ಪು ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಈ ವೇಳೆ ಗಮನ ಸೆಳೆದಿದ್ದು ತುಮಕೂರಿನ ವಿಶೇಷ ಚೇತನ ಅಪ್ಪು ಅಭಿಮಾನಿ. ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರೋ ದೇವಿಪ್ರಿಯಾ, ಪ್ರತಿದಿನ ಅಪ್ಪು ಟೀ ಶರ್ಟ್ ಧರಿಸಿಯೇ ಓಡಾಡ್ತಾರಂತೆ. ಹಬ್ಬ, ಹರಿದಿನ ಇದ್ದಾಗಲೂ ಅಪ್ಪು ಭಾವಚಿತ್ರವಿರೋ ಹೊಸ ಬಟ್ಟೆಯೇ ಬೇಕಂತೆ. ಇಂತಹ ಅಪ್ಪಟ ಅಭಿಮಾನಿಯಾಗಿರೋ ದೇವಿಪ್ರಿಯಾ ಅವರನ್ನು ಖುದ್ದು ಅಪ್ಪು ಅವರೇ ಮನೆಗೆ ಕರೆಸಿ ಸತ್ಕರಿಸಿ ಕಳುಹಿಸಿದರಂತೆ. ಅಂತಹ ಅಪ್ಪಟ ಅಭಿಮಾನಿಯನ್ನು ಕೂಡ ಕರೆಸಿ ಅವರಿಗೆ ಬಟ್ಟೆ, ಹಣ್ಣುಹಂಪಲು ಮತ್ತು ಇನ್ನಿತರ ಸಾಮಗ್ರಿಗಳನ್ನು ಕೊಟ್ಟು ಅಪ್ಪು ಯೂತ್ ಬ್ರಿಗೇಡ್ನ ಸದಸ್ಯರು ಖುಷಿಪಡಿಸಿದರು.
ಈ ವೇಳೆ ಮಾತನಾಡಿದ ದೇವಪ್ರಿಯಾ ತಂದೆ, ನಮ್ಮ ಮಗಳು ಅಪ್ಪು ಸರ್ ಅವರ ಹುಚ್ಚು ಅಭಿಮಾನಿ. ಅವಳು ಪ್ರತಿದಿನ ಎದ್ದಾಗ ದೇವರ ಫೋಟೋ ನೋಡುವುದಿಲ್ಲ ಅಪ್ಪು ಸರ್ ಫೋಟೋ ನೋಡುತ್ತಾಳೆ. ನಮ್ಮ ಮನೆ ಗೋಡೆ ತುಂಬಾ ಅಪ್ಪು ಸರ್ ಫೋಟೋಗಳನ್ನು ಅಂಟಿಸಿದ್ದಾಳೆ. ಅಪ್ಪು ಬದುಕಿದ್ದಾಗ ಯಾವುದೇ ಹಬ್ಬ ಹರಿದಿನ ಇದ್ದಾಗ ನಮ್ಮನ್ನು ಮನೆಗೆ ಕರೆಸಿ ಉಪಚರಿಸಿ ಕಳಿಸ್ತಿದ್ದರು. ನಮ್ಮ ಮಗಳಿಗೆ ಬೇಕಾದ ಬಟ್ಟೆಗಳನ್ನೆಲ್ಲ ಅವರೇ ಕೊಡಿಸುತ್ತಿದ್ದರು . ಆದರೆ ಈಗ ಅಪ್ಪು ಸರ್ ಇಲ್ಲ. ಅವರಿಲ್ಲದಿದ್ದರೂ ಸಹ ಯೂತ್ ಬ್ರಿಗೇಡ್ ನವರು ನಮ್ಮನ್ನು ಅಪ್ಪು ಸರ್ ಯಾವ ರೀತಿ ನೋಡಿಕೊಳ್ಳುತ್ತಿದ್ದರು ಅದೇ ರೀತಿ ನೋಡಿಕೊಳ್ಳುತ್ತಿದ್ದಾರೆ. ಅಪ್ಪು ಸರ್ ನಮ್ಮ ಮನೆಗೆ ಬರ್ತೀನಿ ಅಂತ ಹೇಳಿದರು. ಆದರೆ ನಮ್ಮ ದುರಾದೃಷ್ಟ ಬರೋದಕ್ಕಿಂತ ಮುಂಚೇನೆ ದೇವರು ಅವರನ್ನು ಕರ್ಕೊಂಡ ಎಂದು ಬೇಸರ ವ್ಯಕ್ತಪಡಿಸಿದರು.
ಅಪ್ಪು ಬ್ರಿಗೇಡ್ ನ ಪ್ರತಾಪ್ ಮಾತನಾಡಿ ನಮಗೆ ಇಂದು ಮಾತ್ರ ಅಪ್ಪು ಹುಟ್ಟುಹಬ್ಬವಲ್ಲ. ಅವರ ಹುಟ್ಟುಹಬ್ಬವನ್ನು ನಾವು ವರ್ಷದ 365 ದಿನವೂ ಕೂಡ ಸ್ಪೂರ್ತಿದಾಯಕ ದಿನವನ್ನಾಗಿ ಆಚರಣೆ ಮಾಡುತ್ತೇವೆ . ಅವರ ಆದರ್ಶ ಆಶಯಗಳನ್ನು ಪಾಲಿಸಿಕೊಂಡು ಹೋಗುತ್ತಿದ್ದೇವೆ ಎಂದರು.
ಒಟ್ಟಿನಲ್ಲಿ ಸರಳತೆಯ ಸಾಹುಕಾರ ಅಪ್ಪು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುವ ಬದಲು ಅರ್ಥಪೂರ್ಣವಾಗಿ ಆಚರಿಸಿದ್ದು ಮಾತ್ರ ಒಳ್ಳೆಯ ಸಂಗತಿಯೇ ಸರಿ.