ತುಮಕೂರು :
ತುಮಕೂರು ನಗರದ ಹೆಮ್ಮೆಯ, ಜನಪ್ರಿಯ ಶಾಸಕರಾಗಿರೋ ಜ್ಯೋತಿಗಣೇಶ್ ಅವರು ಇಂದು 50ನೇ ವಸಂತಕ್ಕೆ ಕಾಲಿಟ್ಟಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸಚಿವ ಸೋಮಣ್ಣ ಸೇರಿ ಹಲವು ಮಂದಿ ರಾಜಕೀಯ ನಾಯಕರು ಸಾವಿರಾರು ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಬೆಳಗ್ಗೆಯೇ ಜ್ಯೋತಿ ಗಣೇಶ್ ನಿವಾಸಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಭೇಟಿ ನೀಡಿ, ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವೇಳೆ ಸೋಮಣ್ಣ ಕಾಲಿಗೆ ಬಿದ್ದು ಜ್ಯೋತಿಗಣೇಶ್ ಆಶೀರ್ವಾದ ಪಡೆದುಕೊಂಡಿದ್ದಾರೆ.
ತುಮಕೂರು ನಗರದ ಅಭಿವೃದ್ಧಿಗೆ ಪಣ ತೊಟ್ಟಿರೋ ಶಾಸಕ ಜ್ಯೋತಿ ಗಣೇಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು ಪಾಲಿಕೆ ಆವರಣದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿದರು, ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ಜ್ಯೋತಿ ಗಣೇಶ್, ಬಿಜೆಪಿ ಮುಖಂಡ ಹುಚ್ಚಯ್ಯ ಸೇರಿ ನೂರಾರು ಮಂದಿ ಜ್ಯೋತಿ ಗಣೇಶ್ ಅಭಿಮಾನಿಗಳು ಭಾಗಿಯಾಗಿದ್ದರು. ಶಾಸಕರನ್ನು ಸುತ್ತುವರೆದ ಮಹಿಳಾ ಕಾರ್ಯಕರ್ತೆಯರು ಹೂಗುಚ್ಚ ನೀಡಿ ಶುಭ ಹಾರೈಸಿದರು. ಜ್ಯೋತಿ ಗಣೇಶ್ ಅವರ ಹುಟ್ಟುಹಬ್ಬದ ದಿನವೇ ಪೌರಕಾರ್ಮಿಕರ ದಿನ ಬಂದಿದ್ದು ಅಭಿಮಾನಿಗಳು ಸಮಾಜ ಕಾರ್ಯದಲ್ಲಿ ತೊಡಗಿದ್ದಾರೆ. ಪೌರಕಾರ್ಮಿಕರಿಗಾಗಿ ನೇತ್ರ ತಪಾಸಣೆ, ರಕ್ತದಾನ ಶಿಬಿರ, ಕೃತಕ ಕೈ-ಕಾಲು ಜೋಡಣೆ ಸೇರಿ ಆರೋಗ್ಯ ಶಿಬಿರವನ್ನು ಆಯೋಜನೆ ಮಾಡಿದ್ದರು. ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಜೊತೆಗೆ ಪೌರಕಾರ್ಮಿಕರಿಗೆ ಹಾಗೂ ದಿನಪತ್ರಿಕೆ ವಿತರಕರಿಗೆ ಜರ್ಕಿನ್, ಕುಕ್ಕರ್ ಸೇರಿ ಗೃಹಬಳಕೆಯ ಉಪಕರಣಗಳನ್ನು ವಿತರಣೆ ಮಾಡಿದರು. ಅಲ್ಲದೇ ಆಟೋ ಚಾಲಕರು ಹಾಗೂ APMC ಅಮಾಲಿಗಳಿಗೆ ಸಮವಸ್ತ್ರ ವಿತರಿಸಿ ಅಭಿಮಾನಿಗಳು ಅಭಿಮಾನ ಮೆರೆದರು. ಇನ್ನು ಅಭಿಮಾನಿಗಳ ಅಭಿಮಾನ ಕಂಡು ಜ್ಯೋತಿ ಗಣೇಶ್ ಗದ್ಗದಿತರಾದರು.
ಈ ವೇಳೆ ಮಾತನಾಡಿದ ಶಾಸಕರು, ನಾನು ಹುಟ್ಟುಹಬ್ಬದ ಆಚರಣೆಗೆ ವಿರೋಧ, ಆದರೆ ಅಭಿಮಾನಿಗಳ ಆಸೆಯನ್ನು ಬೇಡ ಎನ್ನಲು ಮನಸ್ಸಿಲ್ಲ. ಕಾರ್ಮಿಕರ ದಿನದಂದೇ ಹುಟ್ಟುಹಬ್ಬ ಇರೋದು ವಿಶೇಷ, ಅಭಿಮಾನಿಗಳು ಪೌರಕಾರ್ಮಿಕರಿಗೆ, ಬೀದಿ ಬದಿ ವ್ಯಾಪಾರಿಗಳಿಗೆ ಗೃಹಬಳಕೆ ವಸ್ತುಗಳನ್ನು ಕೊಡುವ ಮೂಲಕ ಅಭಿಮಾನ ಮೆರೆದಿದ್ದಾರೆ. ಅವರ ಅಭಿಮಾನಕ್ಕೆ ಬೆಲೆ ಕಟ್ಟಲು ಆಗದು ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ಜ್ಯೋತಿಗಣೇಶ್ ಅಭಿಮಾನಿಗಳ ಬಳಗದ ವತಿಯಿಂದ ಒಂದು ಲಕ್ಷ ರೂಪಾಯಿ ಹಣವನ್ನು ದೇಣಿಗೆಯಾಗಿ ಸಂಗ್ರಹಿಸಿದ್ದು, ಆ ಹಣವನ್ನು ಸೈನಿಕರ ಕಲ್ಯಾಣ ನಿಧಿಗೆ ನೀಡಲಾಯಿತು. ಪಾಲಿಕೆ ಆವರಣದ ಅಂಬೇಡ್ಕರ್ ಪ್ರತಿಮೆ ಎದುರು ಮಾಜಿ ಸೈನಿಕರು ಹಾಗೂ ನಗರ ಶಾಸಕ ಜ್ಯೋತಿಗಣೇಶ್ ಸಮ್ಮುಖದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣಗೆ ಚೆಕ್ ಹಸ್ತಾಂತರ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಸೈನಿಕರ ಅಕೌಂಟ್ ಗೆ ಹಾಕಿಸುವಂತೆ ಸಚಿವ ಸೋಮಣ್ಣ ಸಲಹೆ ನೀಡಿದರು. ಶಾಸಕ ಜ್ಯೋತಿ ಗಣೇಶ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ದೇಶದ ಭದ್ರತೆಗಾಗಿ ಪ್ರಾಣ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ಅಳಿಲು ಸೇವೆ ಮಾಡಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.