ತುಮಕೂರು:
ತುಮಕೂರು ಗ್ರಾಮಾಂತರ ವ್ಯಾಪ್ತಿಯ ಕಿತ್ತಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿದ್ದು, ಈ ಶಾಲೆಯಲ್ಲಿ ನೂರಾರು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ಶಾಲೆಯ ಕಾಂಪೌಂಡ್ ಪಕ್ಕದಲ್ಲಿಯೇ ಕೊಟ್ಟಿಗೆ ನಿರ್ಮಿಸಲಾಗಿದ್ದು, ಈ ಕೊಟ್ಟಿಗೆಯಿಂದ ಉತ್ಪತ್ತಿಯಾಗುತ್ತಿರುವ ಸಗಣಿ ಮತ್ತು ಗಂಜಲು ಮಿಶ್ರಿತ ನೀರು ನಿರಂತರವಾಗಿ ಶಾಲೆಯ ಆವರಣದಲ್ಲಿ ಕುಡಿಯುವ ನೀರಿನ ತೊಟ್ಟಿಯನ್ನು ಸೇರುತ್ತಿದೆ. ಕಲುಷಿತ ನೀರು ಕುಡಿಯುವ ನೀರಿನ ತೊಟ್ಟಿಗೆ ಸೇರುತ್ತಿರೋದರಿಂದ ವಿದ್ಯಾರ್ಥಿಗಳಿಗೆ ಅನಾರೋಗ್ಯದ ಭೀತಿ ಕಾಡುತ್ತಿದೆ.
ಕಿತ್ತಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿಯ ಮಕ್ಕಳು ಓದುತ್ತಿದ್ದಾರೆ. ಈ ಮಕ್ಕಳು ಕುಡಿಯುವ ನೀರಿಗೆ ಕಲುಷಿತ ನೀರು ಸೇರುತ್ತಿರೋದರಿಂದ ತುಂಬಾ ತೊಂದರೆಯಾಗ್ತಿದೆ ಎಂದು ಪೋಷಕರು ಮತ್ತು ಎಸ್‌ಡಿಎಂಸಿ ಸದಸ್ಯರು ಹಲವು ಬಾರಿ ಕೊಟ್ಟಿಗೆ ಮಾಲೀಕರಿಗೆ ಕೊಟ್ಟಿಗೆ ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ ಮಾಲೀಕರು ಮಾತ್ರ ಇದಕ್ಕೆ ಕ್ಯಾರೇ ಅಂತಿಲ್ಲ. ಇದು ನಮ್ಮ ಜಾಗ, ನಾವೇನ್ ಬೇಕಾದರೂ ಮಾಡ್ತೀವಿ ಎಂದು ಆವಾಜ್ ಹಾಕಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ, ಶಾಲಾ ಮುಖ್ಯ ಶಿಕ್ಷಕರು ಹೇಳಿದರೂ ಕೂಡ ಕೊಟ್ಟಿಗೆ ಮಾಲೀಕರು ಕೊಟ್ಟಿಗೆ ತೆರವು ಮಾಡಿಲ್ಲ. ಇದು ನಮ್ಮ ಜಾಗ ಎಂದು ಹೇಳುತ್ತಿದ್ದಾರಂತೆ. ಆದರೆ ಇದು ಅವರ ಜಾಗ ಕೂಡ ಅಲ್ಲ, ಸರ್ಕಾರಿ ರಸ್ತೆಯಲ್ಲಿ ಕೊಟ್ಟಿಗೆಯನ್ನು ನಿರ್ಮಿಸಿಕೊಂಡು ಜನರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದರ ಬಗ್ಗೆ ಪ್ರಶ್ನಿಸಲು ಹೋದವರಿಗೆ ಕೆಲ ಪುಂಡರು ಧಮ್ಕಿ ಹಾಕುವ ವಯಸ್ಸಾದವ್ರು ಎಂಬುದನ್ನು ಕೂಡ ನೋಡದೇ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ನಿಮ್ಮ ಮಕ್ಕಳು ಶಾಲೆಯಿಂದ ಹುಷಾರಾಗಿ ಮನೆಗೆ ಬರಬೇಕಲ್ವಾ ಎಂದು ಬೆದರಿಕೆ ಹಾಕುತ್ತಿದ್ದಾರೆ.
ಕೊಟ್ಟಿಗೆಯಿಂದ ಕಲುಷಿತ ನೀರು ಶಾಲಾ ಕುಡಿಯುವ ನೀರಿನ ತೊಟ್ಟಿ ಸೇರುತ್ತಿದ್ದು. ಇದರಿಂದ ಶಾಲಾ ಮಕ್ಕಳಿಗೆ ಆಗಾಗ ಅನಾರೋಗ್ಯದ ಸಮಸ್ಯೆ ಎದುರಾಗ್ತಿದೆಯಂತೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ವಹಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.