ತುಮಕೂರು : ರಾಗಿ ಖರೀದಿ ಕೇಂದ್ರದಲ್ಲಿ ಗೋಲ್ಮಾಲ್ | ರಾಗಿ ಬೆಳೆಗಾರರಿಗೆ ಭಾರೀ ಅನ್ಯಾಯ

ರೈತ ಸಂಘ ಪ್ರತಿಭಟನೆಯನ್ನು ನಡೆಸಿರುವುದು.
ರೈತ ಸಂಘ ಪ್ರತಿಭಟನೆಯನ್ನು ನಡೆಸಿರುವುದು.
ತುಮಕೂರು

ತುಮಕೂರು:

ಬೆಂಬಲ ಬೆಲೆ ನೀಡಿ ರೈತರಿಂದ ನೇರವಾಗಿ ರಾಗಿ ಖರೀದಿಸಲು ತುಮಕೂರು ಜಿಲ್ಲೆಯಲ್ಲಿ ಒಟ್ಟು 10 ಕಡೆ ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ರಾಗಿ ಕೇಂದ್ರ ಸ್ಥಾಪನೆಯಿಂದಾಗಿ ರೈತರು ಖುಷಿಯಿಂದ ತಾವು ಬೆಳೆದ ರಾಗಿ ಬೆಳೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಆದರೆ ಇಲ್ಲ ಸಲ್ಲದ ನೆಪ ಹೇಳಿ ರೈತರಿಂದ ರಾಗಿ ಕೇಂದ್ರದ ಸಿಬ್ಬಂದಿಯಿಂದ ಹಣ ವಸೂಲಿ ಮಾಡ್ತಾ ಇದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತುಮಕೂರು ನಗರದ APMC ಮಾರ್ಕೆಟ್‌ನಲ್ಲಿ ಜಿಲ್ಲಾಡಳಿತ ವತಿಯಿಂದ ರಾಗಿ ಕೇಂದ್ರವನ್ನು ಆರಂಭ ಮಾಡಲಾಗಿದೆ. ರಾಗಿ ಮಾರಾಟ ಮಾಡಲು ಬರುವ ರೈತರಿಗೆ ನೀರು ಹಾಗೂ ನೆರಳಿನ ವ್ಯವಸ್ಥೆಯನ್ನೇನೋ ಮಾಡಿದ್ದಾರೆ. ಆದರೆ ರಾಗಿ ಬೆಳೆಗಾರರಿಂದ ಆಹಾರ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಹಣ ಪೀಕುತ್ತಿದ್ದಾರೆ ಎಂದು ರೈತರು ಆರೋಪ ಮಾಡ್ತಾ ಇದ್ದಾರೆ. ಪ್ರತಿ ರೈತರಿಂದ ಒಂದು ಮೂಟೆಗೆ 40 ರೂಪಾಯಿ ಹಮಾಲಿ ಕೂಲಿ ಎಂದು ವಸೂಲಿ ಮಾಡಲಾಗ್ತಿದೆ. ಅಲ್ಲದೇ 50 ಕೆ.ಜಿ ತೂಕದ ರಾಗಿ ಚೀಲದಲ್ಲಿ ಹೆಚ್ಚುವರಿಯಾಗಿ 52 ಕೆಜಿ ರಾಗಿ ತರುವಂತೆ ರೈತರಿಗೆ ತಾಕೀತು ಮಾಡ್ತಾ ಇದ್ದಾರಂತೆ. 50 ಕೆಜಿ ಮಾತ್ರ ತೂಕ ಮಾಡಿ ಉಳಿದ 2 ಕೆಜಿ ರಾಗಿಯನ್ನು ಅಧಿಕಾರಿಗಳೇ ಪಡೆಯುತ್ತಿದ್ದಾರೆ ಎಂದು ರಾಗಿ ಕೇಂದ್ರದ ಸಿಬ್ಬಂದಿಯ ಅನ್ಯಾಯದ ಬಗ್ಗೆ ರೈತರು ಆರೋಪ ಮಾಡ್ತಾ ಇದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಸುಮಾರು 5324 ಮಂದಿ ರೈತರಿಂದ 75250 ಕ್ವಿಂಟಾಲ್‌ ರಾಗಿ ಖರೀದಿಗೆ ನೋಂದಣಿ ಆಗಿದೆ. ಪ್ರತಿ ರೈತರಿಂದ 20  ಕ್ವಿಂಟಾಲ್ ರಾಗಿ ಮಾತ್ರ ಖರೀದಿ ಮಾಡಲಾಗುತ್ತಿದೆ. ಕ್ವಿಂಟಾಲ್ ಒಂದಕ್ಕೆ 4290 ರೂಪಾಯಿ ನೀಡಲಾಗುತ್ತಿದೆ. ಈ ನಡುವೆ ಹಮಾಲಿ ಕೂಲಿ ಎಂದು ಪ್ರತಿ ಕ್ವಿಂಟಾಲ್ ಗೆ 40 ರೂ ಕಾನೂನು ಬಾಹಿರವಾಗಿ ವಸೂಲಿ ಮಾಡಲಾಗುತ್ತಿದೆ. ಅಂದರೆ ಸರಿ ಸುಮಾರು 30 ಲಕ್ಷ ರೂ ವಸೂಲಿ ಮಾಡಲು ಆಹಾರ ಇಲಾಖೆ ಹೊರಟಿದೆ.  ಆಹಾರ ಇಲಾಖೆಯ ಈ ನಡೆಯನ್ನು ರೈತ ಸಂಘ ಖಂಡಿಸಿ ನಿನ್ನೆ ಪ್ರತಿಭಟನೆಯನ್ನು ಕೂಡ ನಡೆಸಿದ್ದು, ಕ್ರಮ ತೆಗೆದುಕೊಳ್ಳುವಂತೆ ಫುಡ್ ಡಿಡಿಗೆ ಮನವಿ ಮೂಲಕ ದೂರು ನೀಡಿದೆ.

ರಾಗಿ ಕೇಂದ್ರದಲ್ಲಿ ರಾಗಿ ಬೆಳೆಗಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಹಾರ ನಾಗರೀಕ ಸರಬರಾಜು ಇಲಾಖೆಯ ನಿರ್ದೇಶಕ ಮಂಟೆಸ್ವಾಮಿ ಭರವಸೆ ಕೊಟ್ಟಿದ್ದಾರೆ. ಒಟ್ಟಿನಲ್ಲಿ ರೈತರಿಗೆ ಅನ್ಯಾಯ ಆಗಬಾರದೆಂದು ಸರ್ಕಾರ ರಾಗಿ ಖರೀದಿ ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡುತ್ತಿದೆ. ಆದರೆ ಸರ್ಕಾರ ರಂಗೋಲಿ ಕೆಳಗೆ ತೂರಿದರೆ ಅಧಿಕಾರಿಗಳು ಚಾಪೆ ಕೆಳಗಿ ತೂರಿ ರೈತರಿಂದ ಹಣ ಪೀಕುತ್ತಿರುವುದು ದುರಂತವೇ ಸರಿ.

Author:

...
Editor

ManyaSoft Admin

Ads in Post
share
No Reviews