ತುಮಕೂರು:
ಅಂಗಡಿ- ಮುಂಗಟ್ಟುಗಳಲ್ಲಿ ಇಂಗ್ಲೀಷ್ ಭಾಷೆಯನ್ನು ಬಿಟ್ಟು ಕನ್ನಡ ಭಾಷೆಯಲ್ಲೇ ಬೋರ್ಡ್ಗಳನ್ನು ಹಾಕಬೇಕು ಎಂದು ಕನ್ನಡ ಪರ ಸಂಘಟನೆಗಳು ಹಾಗೂ ಕನ್ನಡ ರಕ್ಷಣಾ ವೇದಿಕೆ ಸೇರಿ ಅನೇಕ ಸಂಘಟನೆಗಳು ರಾಜ್ಯಾದ್ಯಂತ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡಿತ್ತು. ಕನ್ನಡ ಪರ ಸಂಘಟನೆಗಳ ಹೋರಾಟದ ಕಿಚ್ಚಿನಿಂದಾಗಿ ಬೆಂಗಳೂರಿನಲ್ಲಿ ಫೇಮಸ್ ಮಾಲ್ ಆಫ್ ಏಷ್ಯಾ ಸೇರಿ ಪ್ರತಿಷ್ಠಿತ ಮಾಲ್ ಹಾಗೂ ಅಂಗಡಿಗಳ ಬೋರ್ಡ್ಗಳಲ್ಲಿ ಶೇಕಡಾ 60ರಷ್ಟು ಕನ್ನಡ ಭಾಷೆಯಲ್ಲೇ ಬೋರ್ಡ್ ಹಾಕಿದ್ರು. ಅಲ್ಲದೇ ಇಂಗ್ಲೀಷ್ ನಲ್ಲಿರೋ ಬೋರ್ಡ್ಗಳನ್ನು ತೆರವು ಮಾಡಲು ಬಿಬಿಎಂಪಿ ಡೆಡ್ಲೈನ್ ನೀಡಿತ್ತು. ಆದರೆ ನಮ್ಮ ತುಮಕೂರಿನಲ್ಲಿ ಮಾತ್ರ ಎಚ್ಚೆತ್ತುಕೊಳ್ಳದ ಅಂಗಡಿ ಮಾಲೀಕರು ಇಂಗ್ಲೀಷ್ನಲ್ಲೇ ಬೋರ್ಡ್ಗಳನ್ನು ಹಾಕಿದ್ದರು, ಈ ಬಗ್ಗೆ ತುಮಕೂರು ಮಹಾನಗರ ಪಾಲಿಕೆ ಕೂಡ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ಕೆರಳಿದ ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆ, ಬೀದಿ ಬದಿ ವ್ಯಾಪಾರಸ್ಥರು, ರೈತ ಸಂಘಟನೆಗಳು ಸೇರಿ ಇಂದು ತುಮಕೂರಿನ ಟೌನ್ ಹಾಲ್ನಲ್ಲಿ ಪ್ರತಿಭಟನೆ ನಡೆಸಿ ಪಾಲಿಕೆ ವಿರುದ್ಧ ಕೆಂಡ ಕಾರಿದರು.
ರಾಜ್ಯದಲ್ಲಿ ಅಂಗಡಿ, ಮಾಲ್, ಮಾರ್ಟ್ಗಳ ನಾಮಫಲಕದಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯಗೊಳಿಸಿದ್ರು ಕೂಡ ತುಮಕೂರಿನ ಅಂಗಡಿ ಮಾಲೀಕರು ಮಾತ್ರ ಡೋಂಟ್ ಕೇರ್ ಮಾಡಿದ್ರು, ಇದರ ಜೊತೆಗೆ ಪಾಲಿಕೆ ಕೂಡ ನಿಯಮ ಉಲ್ಲಂಘಿಸಿದ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ಮೂಲಕ ಪಾಲಿಕೆ ವಿರುದ್ಧ ಆಕ್ರೋಶ ಹೊರಹಾಕಿದರು. ತುಮಕೂರಿನ ಯಾವ್ಯಾವ ಅಂಗಡಿಗಳಲ್ಲಿ ಕನ್ನಡದಲ್ಲಿ ಬೋರ್ಡ್ ಹಾಕಿಸಿಲ್ವೋ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೇರಳ, ತಮಿಳುನಾಡು ಸೇರಿ ಹಲವು ರಾಜ್ಯಗಳಲ್ಲಿ ಅಂಗಡಿ ಬೋರ್ಡ್ ,ಮಾರ್ಗ ಸೂಚಿಗಳಲ್ಲಿ ಅವರ ಭಾಷೆಗೆ ಆದ್ಯತೆಯನ್ನು ನೀಡಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ಈ ನಿಯಮವನ್ನು ಧೂಳಿಪಟ ಮಾಡಿದ್ದಾರೆ. ಹೀಗಾಗಿ ಕೂಡಲೇ ನಮ್ಮ ತುಮಕೂರಿನಲ್ಲಿ ಎಲ್ಲಾ ಅಂಗಡಿಗಳ ನಾಮಫಲಕದಲ್ಲಿ ಕೂಡಲೇ ಶೇಕಡಾ 60 ರಷ್ಟು ಕನ್ನಡವನ್ನು ಕಡ್ಡಾಯಗೊಳಿಸಬೇಕು ಎಂದು ಕನ್ನಡಪರ ಸಂಘಟನೆ ಕಾರ್ಯಕರ್ತರು ಆಗ್ರಹಿಸಿದರು.
ಇನ್ನು ಈ ವೇಳೆ ಮಾತನಾಡಿದ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಅರುಣ್ ಕುಮಾರ್, ಅಂಗಡಿಗಳ ನಾಮಫಲಕದಲ್ಲಿ ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರೋದರ ಜೊತೆಗೆ ಕನ್ನಡಿಗರನ್ನು ಬಿಟ್ಟು ಬೇರೆ ರಾಜ್ಯದವರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾರೆ. ಇದರಿಂದ ಕನ್ನಡಿಗರಿಗೆ ಭಾರೀ ಅನ್ಯಾಯ ಆಗ್ತಿದೆ, ಹೀಗಾಗಿ ಕೂಡಲೇ ಈ ಬಗ್ಗೆ ಸರ್ಕಾರ ಹಾಗೂ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು. ಅಲ್ಲದೇ ರೈತರು ಬೆಳೆಯುವ ಎಳನೀರಿಗೆ ಬೆಂಬಲ ಬೆಲೆ ಒದಗಿಸಬೇಕು. ರೈತರಿಂದ ಕಡಿಮೆ ಬೆಲೆಗೆ ಎಳನೀರನ್ನು ಕೊಂಡು 70 ರೂಪಾಯಿಗೆ ಏಳನೀರು ಮಾರಾಟ ಮಾಡ್ತಾ ಇದ್ದಾರೆ. ಹೀಗಾಗಿ ಕ್ಯಾತ್ಸಂದ್ರದಲ್ಲಿರೋ ಮಾರುಕಟ್ಟೆಯಲ್ಲಿ ಎಳನೀರಿಗೆ ಮಾರುಕಟ್ಟೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಕೂಡಲೇ ಸರ್ಕಾರ, ತುಮಕೂರು ಪಾಲಿಕೆ ಎಚ್ಚೆತ್ತುಕೊಂಡು ಕನ್ನಡ ಭಾಷೆಯನ್ವಯ ಕಡ್ಡಾಯಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಅರುಣ್ ಕುಮಾರ್ ಎಚ್ಚರಿಕೆ ನೀಡಿದರು.