ತುಮಕೂರು : ಪ್ರಜಾಶಕ್ತಿ ಟಿವಿ ವರದಿಗೆ ಸಿಗ್ತು ಫಲಶೃತಿ | ಕೊನೆಗೂ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿದ ಪಾಲಿಕೆ

ತುಮಕೂರು : 

ತುಮಕೂರು ಮಹಾನಗರದಲ್ಲಿ ಎಫ್ ಸಿ ಇಲ್ಲದೇ ಓಡಾಡುತಿದ್ದ 4 ಸಾವಿರ ಆಟೋಗಳನ್ನು ಸೀಜ್ ಮಾಡಲು ಆರ್‌ಟಿಓ ನಿರ್ಧರಿಸಿತ್ತು. ಇದಕ್ಕೆ ಸೆಡ್ಡು ಹೊಡೆದಿದ್ದ ಆಟೋಚಾಲಕರು, ಸ್ಮಾರ್ಟ್‌ ಸಿಟಿ ಕಾಮಗಾರಿ ನೆಪದಲ್ಲಿ ಕೆಡವಲಾಗಿದ್ದ 170 ಆಟೋ ಸ್ಟ್ಯಾಂಡ್‌ ಗಳನ್ನು ಮೊದಲು ನಿರ್ಮಿಸಿ ಕೊಡಿ, ಆಮೇಲೆ ನಾವು ಎಫ್ ಸಿ ಮಾಡಿಸ್ತೀವಿ ಅಂತಾ ಡಿಮ್ಯಾಂಡ್‌ ಇಟ್ಟಿದ್ದರು. ಈ ಬಗ್ಗೆ ಪ್ರಜಾಶಕ್ತಿ ಟಿವಿ  ವರದಿಯನ್ನು ಕೂಡ ಪ್ರಸಾರ ಮಾಡಿತ್ತು. ಆಟೋ ಚಾಲಕರ ಅತಂತ್ರ ಸ್ಥಿತಿ ಕುರಿತು ಮಾರ್ಚ್ 6 ರಂದು ಪ್ರಜಾಶಕ್ತಿ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದೀಗ ಪ್ರಜಾಶಕ್ತಿ ವರದಿಗೆ ಫಲಶೃತಿ ಸಿಕ್ಕಿದ್ದು, ಕೊನೆಗೂ ಆಟೋ ಚಾಲಕರ ಬೇಡಿಕೆಗೆ ಸ್ಪಂದಿಸಿರುವ ಪಾಲಿಕೆ ಬರೋಬ್ಬರಿ ೩೧ ಕಡೆಗಳಲ್ಲಿ ಆಟೋ ಸ್ಟ್ಯಾಂಡ್‌ಗಳನ್ನು ನಿರ್ಮಿಸಲು ಮುಂದಾಗಿದೆ.

ತುಮಕೂರು ನಗರದಲ್ಲಿ ಒಟ್ಟು 12400 ಆಟೋಗಳು ಸಂಚರಿಸುತ್ತಿವೆ. ಅದರಲ್ಲಿ ಬರೊಬ್ಬರಿ 4224 ಆಟೋಗಳಿಗೆ ಎಫ್ ಸಿ ಇರಲಿಲ್ಲ. ಇದು ಪ್ರಯಾಣಿಕರಿಗೆ ಆತ‌ಂಕ ಹುಟ್ಟಿಸುತ್ತಿತ್ತು. ಎಫ್ ಸಿ ಇಲ್ಲದ ಆಟೋಗಳಿಗೆ ಇನ್ಸುರೆನ್ಸ್ ಕೂಡ ಆಗೋದಿಲ್ಲ. ಅಪಘಾತ ಸಂದರ್ಭದಲ್ಲಿ ಯಾವ ಕ್ಲೈಮ್ ಕೂಡ ಆಗಲ್ಲ. ಹೀಗಾಗಿ ಪ್ರಯಾಣಿಕರ ಪ್ರಾಣಕ್ಕೆ ಸಂಚಕಾರ ತಂದೊಡ್ಡುತ್ತಿರುವ ಹಿನ್ನೆಲೆಯಲ್ಲಿ ಎಫ್ ಸಿ ಇಲ್ಲದ ಆಟೋಗಳನ್ನು ಸೀಜ್ ಮಾಡಲು ಆರ್ ಟಿಒ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು.

ಆರ್‌ಟಿಓ ಮತ್ತು ಪೊಲೀಸ್‌ ಇಲಾಖೆಯ ಈ ನಿರ್ಧಾರಕ್ಕೆ ಆಟೋ ಚಾಲಕರ ಸಂಘ ಸೆಡ್ಡು ಹೊಡೆಯಲು ಮುಂದಾಗಿತ್ತು. ತುಮಕೂರು ನಗರದಲ್ಲಿ ಇರುವ ಸುಮಾರು 171ಕ್ಕೂ ಹೆಚ್ಚು ಆಟೋ ಸ್ಟ್ಯಾಂಡ್‌ಗಳನ್ನು ಪಾಲಿಕೆ ಕೆಡವಿದೆ. ಇದರಿಂದ ಆಟೋ ಚಾಲಕರು ಅತಂತ್ರರಾಗಿದ್ದಾರೆ. ಎಷ್ಟೋ ಆಟೋಗಳು ಮನೆ ಮುಂದೆಯೇ‌ ನಿಂತಿವೆ. ಇದಕ್ಕೆ ಜಿಲ್ಲಾಡಳಿತ ಪರಿಹಾರ ಕೊಡಲಿ, ಅದರ ಜೊತೆಗೆ ಆರ್‌ಟಿಒ ಯದ್ವಾತದ್ವಾ ಹೊಸದಾಗಿ ಫರ್ಮಿಟ್ ಕೊಡುತ್ತಿದೆ. ಇದರಿಂದಾಗಿ ಆಟೋಗಳ ಸಂಖ್ಯೆ ಹೆಚ್ಚಾಗಿ ಬಾಡಿಗೆ ಸಿಗುತ್ತಿಲ್ಲ. ಇದಕ್ಕೆ ಆರ್‌ಟಿಒ ಅಧಿಕಾರಿಗಳೇ ಹೊಣೆ ಎಂದು ಆಕ್ರೋಶ ಹೊರಹಾಕಿದ್ರು. ನಮಗೆ  ಆಟೋ ಸ್ಟ್ಯಾಂಡ್‌ಗಳನ್ನು ಪುನರ್ ನಿರ್ಮಿಸಿ ಕೊಟ್ಟರೆ ನಾವು ಎಫ್ ಸಿ ಮಾಡುಸುತ್ತೀವಿ ಅಂತಾ ಪಟ್ಟುಹಿಡಿದಿದ್ದರು. ಆಟೋ ಚಾಲಕರ ಬೇಡಿಕೆಗೆ ಪಾಲಿಕೆ ಕೊನೆಗೂ ಸ್ಪಂದಿಸಿದ್ದು ಸದ್ಯಕ್ಕೆ 31 ಆಟೋ ನಿಲ್ದಾಣ ನಿರ್ಮಿಸಲು ಮುಂದಾಗಿದೆ.

ಟೌನ್ ಹಾಲ್ ವೃತ್ತ, ಖಾಸಗಿ ಬಸ್ ನಿಲ್ದಾಣ, ಶ್ರೀದೇವಿ ಕಾಲೇಜು, ಬಟವಾಡಿ ಹೀಗೆ ಕೆಡವಿದ್ದ 31 ಆಟೋ ನಿಲ್ದಾಣ ನಿರ್ಮಾಣ ಮಾಡಲು ಪಾಲಿಕೆ ಮುಂದಾಗಿದೆ. ಪಾಲಿಕೆಯ ಈ ನಿರ್ಧಾರದಿಂದ ಆಟೋ ಚಾಲಕರು ಸಂತಸಗೊಂಡಿದ್ದಾರೆ. ಪಾಲಿಕೆ ತೆಗೆದುಕೊಂಡಿರುವ ಈ ನಿರ್ಧಾರ ಸ್ವಾಗತಾರ್ಹ. ಆಟೋಗಳಿಗೆ ನೆರಳು ಕಲ್ಪಿಸಬೇಕು, ಅಗತ್ಯ ಇರುವ ಸ್ಥಳದಲ್ಲಿ ಆಟೋ ನಿಲ್ದಾಣ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ಒಟ್ಟಿನಲ್ಲಿ ನಗರದಲ್ಲಿ ೩೧ ಕಡೆಗಳಲ್ಲಿ ಆಟೋ ಸ್ಟ್ಯಾಂಡ್‌ಗಳನ್ನು ನಿರ್ಮಿಸಲು ಮುಂದಾಗಿದ್ದು, ಆಟೋ ಚಾಲಕರು ಕೊಂಚ ನಿರಾಳರಾಗಿದ್ದಾರೆ.

Author:

...
Editor

ManyaSoft Admin

share
No Reviews