ಕನ್ನಡ ಸಾಹಿತ್ಯ ಭವನತುಮಕೂರು
ತುಮಕೂರು: ಶಿರಾ ಕನ್ನಡ ಪ್ರೇಮಿಗಳ ಮಹತ್ವಾಕಾಂಕ್ಷೆಯ ಕನ್ನಡ ಸಾಹಿತ್ಯ ಭವನ ಇಂದು ಉಪಯೋಗವಿಲ್ಲದೇ ಪಾಳುಬಿದ್ದಿದೆ. ಈ ತಾಲೂಕು ಬರಪೀಡಿತ ಪ್ರದೇಶವಾದರೂ ಸಹ ಸಾಹಿತ್ಯ ಕ್ಷೇತ್ರದಲ್ಲಿ ಶ್ರೀಮಂತವಾಗಿದೆ, ಸಾಹಿತ್ಯಾ ಆಸಕ್ತರಿಗೆ ಒಂದು ವೇದಿಕೆ ಹಾಗೂ ಕನ್ನಡ ಸಾಹಿತ್ಯ ಪರಿಷತ್ಗೆ ಸ್ವಂತ ಕಟ್ಟಡ ವಿಲ್ಲದೆ ಸಾಹಿತ್ಯ ಚಟುವಟಿಕೆಗಳಿಗೆ ಅನಾನುಕೂಲಕರ ವಾಗುತ್ತಿತ್ತು, ಅದಕ್ಕಾಗಿಯೇ ಒಂದು ವೇದಿಕೆ ಅತ್ಯವಶ್ಯಕ ಇತ್ತು, ದಶಕಗಳ ಕಾಲ ಅನುದಾನಕ್ಕಾಗಿ ಹಲವರು ಹೋರಾಟ ನಡೆಸಿದ ಫಲವಾಗಿ ಕನ್ನಡ ಭವನ ನಿರ್ಮಾಣವಾಯಿತು.
ಕನ್ನಡ ಭವನ ನಿರ್ಮಾಣವಾಗಿ ಆರಂಭದಲ್ಲಿ ಉತ್ಸಾಹ ತೋರಿದವರು,ಇಂದು ಕಾಲ ಹುರುಳಿದಂತೆ ಕನ್ನಡ ಸಾಹಿತ್ಯ ಭವನದಲ್ಲಿ ಸಾಹಿತ್ಯಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಭವನದ ಒಳಗೆ ಜೇಡ ಬೆಳೆದಿದೆ. ಭವನದ ಸುತ್ತಲೂ ಕಸದ ರಾಶಿ ಬಿದ್ದಿದೆ. ಕಿಡಿಗೇಡಿಗಳು ಗೋಡೆಗೆ ಅಸಭ್ಯ ಬರಹಗಳನ್ನು ಬರೆದಿದ್ದಾರೆ. ಭವನದ ಸುತ್ತ ಯಥೇಚ್ಛ ಪ್ರಮಾಣದಲ್ಲಿ ಗಿಡಗಂಟೆಗಳು ಬೆಳೆದು ನಿಂತಿವೆ. ಭವನದ ಆವರಣದಲ್ಲಿ ಗುಟುಕಾ ಮತ್ತಿತರ ತ್ಯಾಜ್ಯ ಹರಡಿದ್ದು, ಸಂಜೆಯಾದರೆ ಕಿಡಿಗೇಡಿಗಳ ಗುಂಪು ಇಲ್ಲಿ ಸೇರಿಕೊಂಡು ಮದ್ಯಪಾನ ಮಾಡುತ್ತಾರೆ ಎಂದು ಇಲ್ಲಿಯ ನಿವಾಸಿಗಳು ತಿಳಿಸಿದ್ದಾರೆ.
ಶಿರಾದ ಸರ್ಕಾರಿ ಕಾಲೇಜಿನ ಆವರಣದಲ್ಲಿರುವ ಈ ಕನ್ನಡ ಸಾಹಿತ್ಯ ಪರಿಷತ್ ಭವನದ ಹೊರಗಡೆ ಬೆಳಕಿನ ವ್ಯವಸ್ಥೆ ಇಲ್ಲದೇ ಇರುವ ಕಾರಣ ಆಗಾಗ ಕಿಡಿಗೇಡಿಗಳು ಅನೈತಿಕ ಚಟುವಟಿಕೆಗಾಗಿ ಬಳಕೆ ಮಾಡುತ್ತಿರುವುದು ದುರಂತವೇ ಸರಿ ಇನ್ನಾದರು ಸಂಭಂದಪಟ್ಟ ಅಧಿಕಾರಿಗಳು ಕನ್ನಡ ಸಾಹಿತ್ಯ ಭವನ ನಿರ್ವಹಣೆಗೆ ಗಮನ ಹರಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.