ತುಮಕೂರು: ಕೈ ಕೊಡ್ತಾ ಇರೋ ಟಾಟಾ ಏಸ್‌ ಗಾಡಿಗಳು... ವಾಹನ ಚಾಲಕರ ಆಕ್ರೋಶ

ಶಾಂತಿನಾಥ ಟಾಟಾ ಮೋಟರ್ಸ್‌ ಶೋರೂಂ ಬಳಿ ಗ್ರಾಹಕರು ಹಾಲು ಸುರಿದು ಪ್ರತಿಭಟನೆ ಮಾಡಿದರು.
ಶಾಂತಿನಾಥ ಟಾಟಾ ಮೋಟರ್ಸ್‌ ಶೋರೂಂ ಬಳಿ ಗ್ರಾಹಕರು ಹಾಲು ಸುರಿದು ಪ್ರತಿಭಟನೆ ಮಾಡಿದರು.
ತುಮಕೂರು

ತುಮಕೂರು:

ಇದು ಹೇಳಿ ಕೇಳಿ ಪ್ರತಿಷ್ಠಿತ ಶೋರೂಂ, ಆದರೆ ಗಾಡಿ ತಗೋಳೋವರೆಗೂ ಮಾತ್ರ ನಮ್ಮ ಸರ್ವೀಸ್‌ ಚೆನ್ನಾಗಿದೆ, ನಮ್ಮ ಶೋರೂಂನಲ್ಲಿ ಆ ಆಫರ್‌ ಇದೆ, ಈ ಆಫರ್‌ ಇದೆ ಅಂತಾ ಬಡಾಯಿ ಕೊಚ್ಚಿಕೊಳ್ತಾರೆ. ಆದರೆ ಗಾಡಿ ತಗೊಂಡ ಮೇಲೆ ತಮ್ಮ ವರಸೆಯನ್ನು ಬದಲಿಸಿದ್ದಾರೆ. ಇದರಿಂದ ಕಂಗಾಲಾದ ಗ್ರಾಹಕರು ರೊಚ್ಚಿಗೆದ್ದು ಶೋರೂಂ ಮುಂದೆ ಹಾಲನ್ನು ಸುರಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಹೌದು ತುಮಕೂರಿನ ಪ್ರತಿಷ್ಠಿತ ಟಾಟಾ ಶೋ ರೂಂ ಆದ ಶಾಂತಿನಾಥ ಟಾಟಾ ಮೋಟರ್ಸ್‌ನಲ್ಲಿ ಸರಿಯಾದ ಮೆಕ್ಯಾನಿಕ್‌ ಇಲ್ಲದೇ ಟಾಟಾ ಏಸ್‌ ಗಾಡಿಗಳು ಪದೇ ಪದೇ ರಿಪೇರಿಗೆ ಬರ್ತಾ ಇದ್ದು, ರಿಪೇರಿಗೆಂದು ಗಾಡಿ ತಗೊಂಡು ಬಂದರೆ ಲೇಬರ್‌ ಚಾರ್ಜ್‌ ಜಾಸ್ತಿ ಮಾಡಿ ಬಿಲ್‌ ಮಾಡ್ತಿದ್ದಾರೆ. ಇದರಿಂದ ದುಡಿಯೋ ದುಡ್ಡು ಒಂದು ರೂಪಾಯಿ ಉಳಿಯದೇ ಸಾಲ ಮಾಡಿಕೊಂಡು ಜೀವನ ಮಾಡೋ ಸ್ಥಿತಿ ಬಂದಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಾಲು ಸಾಗಾಟ ಮಾಡಲು ಗ್ರಾಹಕರು ಶಾಂತಿನಾಥ ಟಾಟಾ ಮೋಟರ್ಸ್‌ ಶೋರೂಂನಲ್ಲಿ ಟಾಟಾ ಏಸ್‌ ಗಾಡಿಗಳನ್ನು ಕೊಂಡಿದ್ದಾರೆ. ಆದರೆ ಪದೇ ಪದೇ ಗೇರ್‌ ಸಮಸ್ಯೆ ಆಗ್ತಾ ಇದ್ದು, ಶೋರೂಂನಲ್ಲಿ ರಿಪೇರಿಗೆ ಬಿಟ್ಟರೆ, ಏನು ರಿಪೇರಿ ಮಾಡಲು ಬಾರದ ಮೆಕ್ಯಾನಿಕ್‌ಗಳು ಕೆಲಸ ಮಾಡ್ತಾ ಇದ್ದು, ಸರಿಯಾಗಿ ರಿಪೇರಿ ಮಾಡದೇ ಗಾಡಿಗಳು ಪದೇ ಪದೇ ಕೈ ಕೊಡುತ್ತಿವೆ.  ಇದರಿಂದ ನಮ್ಮ ದುಡ್ಡನ್ನು ಸುಮ್ಮನೆ ಗಾಡಿ ರಿಪೇರಿಗೆ ಖರ್ಚು ಮಾಡಿ ಸಾಲ ಮಾಡುವ ಸ್ಥಿತಿ ಇದೆ. ಎಂದು ಟಾಟಾ ಶೋ ರೂಂ ಮುಂದೆ ಹಾಲನ್ನು ಸುರಿದು ಶೋ ರೂಂ ವಿರುದ್ಧ ಕಿಡಿಕಾರಿದರು.

ಈ ಶೋ ರೂಂನಲ್ಲಿ ಹಾಲಿನ ಕ್ಯಾನ್‌ ಸಾಗಾಟ ಮಾಡಲು ಒಂದೂವರೆ ವರ್ಷದ ಹಿಂದೆ ಟಾಟಾ ಏಸ್‌ ಗಾಡಿಯನ್ನು ತಗೊಂಡಿದ್ದೀವಿ. ಒಂದೂವರೆ ವರ್ಷದಲ್ಲಿ ಸುಮಾರು 11 ಬಾರಿ ರಿಪೇರಿಗೆ ಬಂದಿದೆ. ಅಲ್ಲದೇ ಒಂದೂವರೆ ಸಾವಿರ ಐಟಂಗೆ ಸುಮಾರು 7 ಸಾವಿರ ಲೇಬರ್‌ ಚಾರ್ಜ್‌ ಮಾಡಿದ್ದಾರೆ. ಶೋರೂಂನಲ್ಲಿ ಗಾಡಿಗಳನ್ನು ಸರಿಯಾಗಿ ರಿಪೇರಿ ಮಾಡ್ತಿಲ್ಲ. ಇದರಿಂದ ಅಲ್ಲಲ್ಲಿ ಗಾಡಿಗಳು ಕೈ ಕೊಡ್ತಾ ಇದ್ದಾವೆ. ನಮ್ಮ ಕೆಲಸಕ್ಕೂ ತೋಂದರೆ ಆಗ್ತಿದ್ದು, ವ್ಯಾಪಾರ ಲಾಸ್‌ ಆಗ್ತಾ ಇದೆ. ಮನೆಯಲ್ಲಿದ್ದ ಚಿನ್ನವನ್ನೆಲ್ಲ ಅಡ ಇಟ್ಟಿದ್ದು ಈಗ ಹರಾಜಿಗೆ ಬಂದಿದೆ ಎಂದು ಹಾಲಿನ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

ಟಾಟಾ ಏಸ್‌ ಗಾಡಿಯಲ್ಲಿ ಹಾಲನ್ನು ಸಾಗಾಟ ಮಾಡುವಾಗ ಸಡನ್‌ ಆಗಿ ಗಾಡಿ ಕೈಕೊಟ್ಟಿದ್ದು, ಸರಿಯಾದ ಸಮಯಕ್ಕೆ ಡೈರಿಗೆ ಹಾಲನ್ನು ಸಾಗಾಟ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಹಾಲಿನ ಡೈರಿಗೆ ನಮ್ಮ ಕೈಯಿಂದಲೇ ದುಡ್ಡನ್ನು ಕಟ್ಟಿಕೊಟ್ಟಿದ್ದೇವೆ. ಇದೇ ಪರಿಸ್ಥಿತಿ ಮುಂದುವರೆದರೆ ಶೋ ರೂಂ ಮುಂದೆ ನೇಣಿಗೆ ಶರಣಾಗುತ್ತೇವೆ ಎಂದು ಏಚ್ಚರಿಕೆ ನೀಡಿದರು.

ಇನ್ನು ಪ್ರತಿಭಟನೆ ನಡೆಯುತ್ತಿದ್ದಂತೆ ನಮ್ಮ ಕಡೆಯಿಂದ ಯಾವ ತೊಂದರೆ ಆಗ್ತಿಲ್ಲ, ವಾರೆಂಟ್‌ ಇದ್ದರೆ ನಾವು ಕ್ಲೈಂ ಮಾಡಿ ಕೊಡ್ತೀವಿ, 72 ಸಾವಿರ ಕಿಲೋಮೀಟರ್‌ ವರೆಗೂ ವಾರೆಂಟಿ ಇರುತ್ತೆ, ಆದರೆ ಆ ಲಿಮಿಟ್‌ನ ಇವರ ಗಾಡಿ ಕ್ರಾಸ್‌ ಮಾಡಿರೋದರಿಂದ ನಾವು ಏನು ಮಾಡಲು ಬರೋಲ್ಲ. ಕೆಲವೊಂದು ಮೇಜರ್‌ ಪ್ರಾಬ್ಲಂ ಆದಾಗ ಕಂಪನಿಯವರನ್ನೇ ಕರೆತರಬೇಕಾಗುತ್ತೆ ಎಂದು ಸಮಜಾಯಿಷಿ ಕೊಟ್ಟರು.

ಅದೇನೇ ಆಗಲಿ ಬಡ ರೈತರ ಮಕ್ಕಳು ಸಾಲ ಸೋಲ ಮಾಡಿ ಗಾಡಿಕೊಂಡು ಹಾಲನ್ನು ಸಾಗಾಟ ಮಾಡಿ ಜೀವನ ಕಟ್ಟಿಕೊಳ್ಳುತ್ತಿದ್ದಾರೆ. ಇನ್ನಾದರೂ ಟಾಟಾ ಶೋರೂಂ ಸಿಬ್ಬಂದಿ ಗಾಡಿಗಳನ್ನು ಸರಿಯಾಗಿ ರಿಪೇರಿ ಮಾಡಿಕೊಟ್ಟು ಅವರ ವ್ಯಾಪಾರಕ್ಕೆ ದಾರಿ ಮಾಡಿಕೊಡಬೇಕಿದೆ.

Author:

...
Editor

ManyaSoft Admin

Ads in Post
share
No Reviews