ತುಮಕೂರು:
ತುಮಕೂರಿನ ಪ್ರತಿಷ್ಠಿತ ಆಕಾಶ್ ಜ್ಯೂವೆಲ್ಲರಿ ಶಾಪ್ ಮಾಲೀಕ ಶಿವಾನಂದ ಮೂರ್ತಿ ಜನರಿಗೆ ದುಪ್ಪಟ್ಟು ಬಡ್ಡಿ ಆಮೀಷವೊಡ್ಡಿ ಜನರಿಗೆ ಕೋಟಿ ಕೋಟಿ ಉಂಡೆನಾಮ ಹಾಕಿ ಎಸ್ಕೇಪ್ ಆಗಿದ್ದ. ಹೆಚ್ಚು ಬಡ್ಡಿ ದುಡ್ಡು ಕೊಡ್ತೀವಿ ಅಂತೇಳಿ ನೂರಾರು ಜನರ ಕೋಟ್ಯಾಂತರ ರೂಪಾಯಿ ದೋಚಿ ಆಕಾಶ್ ಜ್ಯೂವೆಲರಿ ಶಾಪ್ ಮಾಲೀಕ ಶಿವಾನಂದ ಮೂರ್ತಿ ಕುಟುಂಬ ಸಮೇತ ಪರಾರಿಯಾಗಿದ್ದರು. ಇದೀಗ ತುಮಕೂರು ಪೊಲೀಸರು ಆರೋಪಿ ಶಿವಾನಂದ ಮೂರ್ತಿ ಹಾಗೂ ಪತ್ನಿ ಅನ್ನಪೂರ್ಣರನ್ನು ಬಂಧಿಸಿದ್ದಾರೆ.
ತುಮಕೂರು ನಗರದಲ್ಲಿ ಆಕಾಶ್ ಜ್ಯೂವೆಲ್ಲರಿ ಸೇರಿದಂತೆ "ಆಕಾಶ ಸೌಹಾರ್ದ ಕೋ ಆಪರೇಟಿವ್" ಸೊಸೈಟಿಯನ್ನು ಕೂಡ ಶಿವಾನಂದಮೂರ್ತಿ ಸ್ಥಾಪಿಸಿದ್ದರು. ಈ ಸೊಸೈಟಿ ಮೂಲಕ ದುಪ್ಪಟ್ಟು ಬಡ್ಡಿ ಕೊಡ್ತೀವಿ ಅಂತೇಳಿ ತುಮಕೂರು, ಬೆಂಗಳೂರು, ದಾವಣಗೆರೆ, ಚಿತ್ರದುರ್ಗ, ಸೇರಿ ಹಲವು ಜಿಲ್ಲೆಗಳ ಜನರಿಂದ ಚೀಟಿಯನ್ನು ಹಾಕಿಸಿಕೊಂಡಿದ್ದ. ಯಾವಾಗ ಕೋಟಿ ಕೋಟಿ ಹಣ ಶಿವಾನಂದ ಮೂರ್ತಿ ಕೈಗೆ ಸೇರಿತೋ ಆಗ ಶಿವಾನಂದಮೂರ್ತಿ ವರಸೆ ಚೇಂಜ್ ಮಾಡಿದ. ಕೋಟಿ ಕೋಟಿ ಹಣದ ಜೊತೆ ಕುಟುಂಬ ಸಮೇತ ನಗರದಿಂದ ಕಾಲ್ಕಿತ್ತಿದ್ದರು. ಸುಮಾರು 20 ದಿನಗಳಿಂದ ಮಾಲೀಕ ಶಿವಾನಂದ ಮೂರ್ತಿ ಅಂಗಡಿಯಲ್ಲೂ ಕಾಣಿಸುತ್ತಿರಲಿಲ್ಲ. ಬಳಿಕ ಮನೆಯಲ್ಲಿಯೂ ಇರಲಿಲ್ಲ. ಆಗ ಜನರಿಗೆ ಮಾಲೀಕನ ಕರಾಮತ್ತು ಬಯಲಾಗಿದೆ.
ಆಕಾಶ್ ಜ್ಯೂವೆಲ್ಲರಿ ಮಾಲೀಕ ಶಿವಾನಂದ ಮೂರ್ತಿಗಾಗಿ ವಂಚನೆಗೊಳಗಾದ ಜನರು ಹುಡುಕಾಟ ನಡೆಸಿದ್ದಾರೆ. ಆದರೆ ಎಲ್ಲೂ ಸಿಗದಿದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರನ್ನು ದಾಖಲಿಸಿಕೊಂಡಿದ್ದರು. ಶಿವಾನಂದ ಮೂರ್ತಿಯನ್ನು ಬೆನ್ನಟ್ಟಿದ ಪೊಲೀಸರು ಅವರ ಮೊಬೈಲ್ ಫೋನ್, ಸ್ನೇಹಿತರು, ಸಂಬಂಧಿಕರನ್ನು ಜಾಲಾಡಿದ್ದರು. ಕೊನೆಗೆ ಆರೋಪಿ ಶಿವಾನಂದಮೂರ್ತಿ ಹಾಗೂ ಪತ್ನಿ ಅನ್ನಪೂರ್ಣ ಬೆಂಗಳೂರಿನಲ್ಲಿ ಇರುವುದು ತಿಳಿದು ಬೆಂಗಳೂರಿನಲ್ಲೇ ಆರೋಪಿ ಶಿವಾನಂದ ಮೂರ್ತಿ ಹಾಗೂ ಪತ್ನಿ ಅನ್ನಪೂರ್ಣರನ್ನ ಬಂಧಿಸಿದ ಪೊಲೀಸರು ತುಮಕೂರಿಗೆ ಕರೆತಂದಿದ್ದಾರೆ. ಸದ್ಯ ಇಬ್ಬರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದು, ಜನರಿಗೆ ತಮ್ಮ ಹಣ ಸೇರುತ್ತಾ ಎಂದು ಕಾದುನೋಡಬೇಕಿದೆ.