ತುಮಕೂರು:
ಗ್ಯಾರೆಂಟಿ ಕೊಟ್ಟು ಕೆಟ್ವಿ ಅನ್ನುವಂತಹ ಸ್ಥಿತಿ ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದ್ದು. ಉಚಿತ ಭಾಗ್ಯಗಳು ರಾಜ್ಯ ಸರ್ಕಾರಕ್ಕೆ ಹೊರೆಯಾಗಿದ್ದು, ಈ ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಮೇಲೆಯೇ ಬರೆ ಹಾಕೋದಕ್ಕೆ ಮುಂದಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತೆರಿಗೆ, ಶುಲ್ಕ ಅಂತೇಳಿ ಜನರ ಪ್ರಾಣ ಹಿಂಡುತ್ತಿರುವ ಸರ್ಕಾರ, ಇದೀಗ ತೀರಾ ಕೆಳಮಟ್ಟಕ್ಕೆ ಇಳಿದು ವಾಯು ವಿಹಾರಿಗಳಿಗೆ, ಕ್ರೀಡಾಪಟುಗಳಿಗೂ ಶುಲ್ಕ ವಿಧಿಸಲು ಮುಂದಾಗಿದೆ. ಸರ್ಕಾರಿ ಕ್ರೀಡಾಂಗಣಗಳಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಹಾಗೂ ವಾಯು ವಿಹಾರ ಮಾಡುವ ಸಾರ್ವಜನಿಕರಿಗೂ ಶುಲ್ಕ ವಿಧಿಸುವ ಸುತ್ತೋಲೆ ಹೊರಡಿಸಿದ್ದು, ಇದು ಇಡೀ ರಾಜ್ಯಾದ್ಯಂತ ಮಾರ್ಚ್೧ ರಿಂದ ಜಾರಿಯಾಗಲಿದೆ.
ವಿಶೇಷವಾಗಿ ತುಮಕೂರು ನಗರದ ಮಹಾತ್ಮಾಗಾಂಧಿ ಕ್ರೀಡಾಂಗಣವನ್ನು ವಿಶ್ವದರ್ಜೆಯ ಕ್ರೀಡಾಂಗಣದ ರೀತಿಯಲ್ಲಿ ನವೀಕರಣ ಗೊಳಿಸಲಾಗಿದೆ. ಇಲ್ಲಿ ಪ್ರಾಕ್ಟಿಸ್ ಮಾಡುವ ಪ್ರತಿ ಕ್ರೀಡಾಪಟುಗಳಿಗೂ, ವಾಕಿಂಗ್ ಮಾಡೋರಿಗೂ ಶುಲ್ಕ ವಿಧಿಸಲಾಗುತ್ತದೆ. ತಮ್ಮ ಆರೋಗ್ಯ ರಕ್ಷಣೆಗಾಗಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ವಾಕ್ ಮಾಡುವ ವಯೋ ವೃದ್ದರಿಗೆ ತಿಂಗಳಿಗೆ ೩೦೦ ರೂ. ಶುಲ್ಕ ವಿಧಿಸುವುದಾಗಿ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದೆ.
ಇನ್ನು ಶೆಟಲ್ ಕಾಕ್ ಆಡೋರಿಗೆ ಪ್ರತಿ ಗಂಟೆಗೆ ೨೦೦ ರೂ ಶುಲ್ಕ, ಈಜುಪಟುಗಳಿಗೆ ಗಂಟೆಗೆ ೧೦೦ ರೂ, ಟೆನ್ನಿಸ್ ಆಡೋರಿಗೆ ಗಂಟೆಗೆ ೪೦ ರೂ, ಕಬ್ಬಡ್ಡಿ, ವಾಲಿಬಾಲ್, ಖೋ ಖೋ ಅಂಕಣಕ್ಕೆ ಮಾಸಿಕ ೫೦೦ ರೂ. ಹೀಗೆ ಪ್ರತಿ ಕ್ರೀಡೆಗೂ ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಕೀರ್ತಿ ತಂದ ಕ್ರೀಡಾಪಟುಗಳಿಗೂ ಉಚಿತ ತರಬೇತಿ ಇಲ್ಲಿ ಸಿಗೋದಿಲ್ಲ. ಕ್ರೀಡಾಂಗಣ ನಿರ್ವಹಣೆ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಉಚಿತವಾಗಿ ತರಬೇತಿ ಕೊಡಬೇಕಾದ ಸರ್ಕಾರವೇ ಶುಲ್ಕ ವಿಧಿಸಲು ಮುಂದಾಗಿರೋದಕ್ಕೆ ವಿರೋಧ ವ್ಯಕ್ತವಾಗಿದೆ.
ಇಡೀ ರಾಜ್ಯಾದ್ಯಂತ ಈ ಶುಲ್ಕ ಜಾರಿಯಾಗಲಿದೆ. ವಾಯುವಿಹಾರಿಗಳು ಸ್ವಚ್ಛಂದವಾಗಿ ವಿಹರಿಸಿ ತಂಪು ಗಾಳಿ ಸೇವನೆ ಮಾಡಲೂ ಈ ಸರ್ಕಾರಕ್ಕೆ ಶುಲ್ಕ ಕೊಡುವ ಪರಿಸ್ಥಿತಿ ಬಂತಲ್ಲಾ ಎಂದು ಹಿಡಿಶಾಪ ಹಾಕುತಿದ್ದಾರೆ.