ತುಮಕೂರು:
ದಿನೇದಿನೇ ತುಮಕೂರು ನಗರ ದೊಡ್ಡದಾಗಿ ಬೆಳೆದಂತೆಲ್ಲಾ ನಗರದಲ್ಲಿ ಕಸದ ಸಮಸ್ಯೆ ಕೂಡ ದೊಡ್ಡದಾಗುತ್ತಲೇ ಹೋಗ್ತಿದೆ. ಒಂದು ಕಡೆ ತುಮಕೂರು ನಗರ ಸ್ಮಾರ್ಟ್ ಸಿಟಿ ಅನ್ನೋ ಹಣೆಪಟ್ಟಿಯನ್ನು ಹೊತ್ತುಕೊಂಡಿದೆ. ಮತ್ತೊಂದು ಕಡೆ ಪಾಲಿಕೆಯ ನಿರ್ಲಕ್ಷ್ಯ, ಕೆಲ ಅನಾಗರೀಕರು ಮಾಡುತ್ತಿರುವ ಕೆಲಸದಿಂದಾಗಿ ತುಮಕೂರು ನಗರ ಗಾರ್ಬೇಜ್ ಸಿಟಿಯಾಗಿ ಬದಲಾಗ್ತಿದೆ.
ಒಂದು ಕಡೆ ಎಲ್ಲೆಂದರಲ್ಲಿ ಕಸವನ್ನು ಸುರಿಯುತ್ತಿರೋ ಜನರು, ಇನ್ನೊಂದೆಡೆ ಬಿದ್ದಿರುವ ಕಸವನ್ನು ತುಂಬಿಕೊಂಡು ಹೋಗದ ಪಾಲಿಕೆ ಸಿಬ್ಬಂದಿ. ಕಸದ ರಾಶಿಗಳಿಂದಾಗಿ ಗಬ್ಬು ನಾರುತ್ತಿರುವ ಏರಿಯಾ. ದಿನ ಮೂಗು ಮುಚ್ಚಿಕೊಂಡೇ ಓಡಾಡುವ ದುಸ್ಥಿತಿ ತುಮಕೂರು ನಗರದ ಎಸ್ ಎಸ್ ಪುರಂ ರಸ್ತೆಯಲ್ಲಿ ಕಂಡುಬಂದಿದೆ.
ಎಸ್ಎಸ್ ಪುರಂ ನ ಆರನೇ ಅಡ್ಡರಸ್ತೆಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಈ ಏರಿಯಾದಲ್ಲಿ ಕೆಲವು ಕಿಡಿಗೇಡಿಗಳು ದ್ವಿಚಕ್ರ ವಾಹನದಲ್ಲಿ ಬಂದು ರಸ್ತೆ ಬದಿಯಲ್ಲಿ ಕಸವನ್ನು ಬಿಸಾಡಿ ಹೋಗ್ತಿದ್ದಾರಂತೆ. ಹೀಗಾಗಿ ಏರಿಯಾ ತುಂಬಾ ಕಸದ ರಾಶಿ ತುಂಬಿಕೊಂಡಿದೆ. ಇನ್ನು ಈ ಏರಿಯಾದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಇದ್ದರೂ ಕೂಡ ಕಿಡಿಗೇಡಿಗಳು ಕ್ಯಾರೇ ಅಂತಿಲ್ಲ. ಬೇರೆ ಕಡೆಯಿಂದ ಕಸವನ್ನು ಕವರ್‌ಗಳಲ್ಲಿ ಕಟ್ಟಿ ದ್ವಿಚಕ್ರ ವಾಹನಗಳಲ್ಲಿ ಬಂದು ಎಸೆದುಹೋಗ್ತಿದ್ದಾರೆ. ಮಾಂಸದ ತ್ಯಾಜ್ಯ, ಬಿಯರ್ ಬಾಟಲ್ ಸೇರಿ ಇತರೆ ಕಸವು ಕೊಳೆತು ದುರ್ವಾಸನೆ ಬೀರುತ್ತಿದೆ. ಇದರಿಂದ ಅಕ್ಕಪಕ್ಕದ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.
ಕಸದಿಂದ ಸೊಳ್ಳೆ, ನೊಣಗಳ ಹಾವಳಿ ಹೆಚ್ಚಾಗ್ತಾ ಇದ್ದು ಸಾಂಕ್ರಾಮಿಕ ರೋಗ ಹೆಚ್ಚಾಗುವ ಭೀತಿ ಹೆಚ್ಚಾಗಿದೆ. ಇಷ್ಟೆಲ್ಲಾ ಕಸ ಇದ್ದರೂ ಕೂಡ ಪಾಲಿಕೆ ಸಿಬ್ಬಂದಿ ಮಾತ್ರ ಇತ್ತ ಗಮನ ಹರಿಸುತ್ತಿಲ್ಲ. ಅಲ್ಲದೇ ಎರಡು ದಿನಕ್ಕೊಮ್ಮೆ ಕಸದ ಗಾಡಿ ಬಂದರೂ ಕೂಡ ಕಸವನ್ನು ಗಾಡಿಗೆ ಹಾಕದೇ ರಾತ್ರಿ ವೇಳೆ ಬಂದು ರಸ್ತೆ ಬದಿ ಸುರಿದು ಹೋಗುತ್ತಿದ್ದಾರೆ. ಹೀಗಾಗಿ ಜನರು ಕೂಡ ಎಚ್ಚೆತ್ತುಕೊಳ್ಳಬೇಕಿದೆ. ಜೊತೆಗೆ ಪಾಲಿಕೆ ಕೂಡ ಇಂತಹವರಿಗೆ ಫೈನ್ ಹಾಕುವುದರ ಮೂಲಕ ಇದಕ್ಕೆಲ್ಲಾ ಕಡಿವಾಣ ಹಾಕಬೇಕಿದೆ.