ತುಮಕೂರು :
ತುಮಕೂರಿನಲ್ಲಿ ಸರ್ವಾಧಿಕಾರಿ ಆಡಳಿತ ಏನಾದರೂ ನಡೀತಾ ಇದ್ಯಾ? ನಿಜಕ್ಕೂ ಹೀಗೊಂದು ಪ್ರಶ್ನೆ ಸಾರ್ವಜನಿಕರಲ್ಲಿ ಮೂಡೋದಕ್ಕೆ ಶುರುವಾಗಿದೆ. ಇಲ್ಲಿ ಹೇಳೋರಿಲ್ಲ. ಕೇಳೋರಿಲ್ಲ. ಕಡೆ ಪಕ್ಷ ಶಾಂತಿಯುತ ಪ್ರತಿಭಟನೆ ಮಾಡೋದಕ್ಕೂ ಅವಕಾಶವಿಲ್ಲಾ ಅಂದರೆ ಜನರು ಬದುಕೋದು ಹೇಗೆ? ತಮ್ಮ ಹಕ್ಕುಗಳನ್ನು ಪಡೆದುಕೊಳ್ಳೋದು ಹೇಗೆ? ನ್ಯಾಯ ಕೇಳೋದು ಹೇಗೆ? ಅನ್ನೋ ಪ್ರಶ್ನೆಗಳು ಮೂಡೋದಕ್ಕೆ ಶುರುವಾಗಿದೆ.
ಸತ್ಯಾಗ್ರಹ ಅನ್ನೋದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ನಮಗೆಲ್ಲಾ ಹೇಳಿಕೊಟ್ಟಿರೋ ಅಹಿಂಸಾತ್ಮಕ ಹೋರಾಟ. ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ತಮ್ಮ ಹಕ್ಕನ್ನು, ನ್ಯಾಯವನ್ನು ಕೇಳುವ ಹಕ್ಕು ಈ ದೇಶದ ಪ್ರತಿಯೊಬ್ಬ ಪ್ರಜೆಗೂ ಇದೆ. ಆದರೆ ತುಮಕೂರು ಜಿಲ್ಲಾಡಳಿತ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಭೂಮಿ ಮತ್ತು ವಸತಿ ರಹಿತರನ್ನೇ ಒಕ್ಕಲೆಬ್ಬಿಸಿ, ತಮ್ಮ ಹಕ್ಕು ಕೇಳಲು ಬಂದಿದ್ದ ಬಡಜನರನ್ನೇ ಅರೆಸ್ಟ್ ಮಾಡುವ ಕೆಲಸ ಮಾಡಿದೆ.
ಕಳೆದ 16 ದಿನಗಳಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಜನ ಭೂಮಿ ಹಾಗೂ ವಸತಿ ರಹಿತರು ತಮಗೆ ಹಕ್ಕು ಪತ್ರಗಳನ್ನು ನೀಡುವಂತೆ ಒತ್ತಾಯಿಸಿ ಅಹೋರಾತ್ರಿ ಧರಣಿಯನ್ನು ನಡೆಸುತ್ತಿದ್ದರು. ಆದರೆ ಇಂದು ಬೆಳಗ್ಗಿನ ಜಾವ ಏಕಾಏಕಿ ಬಂದ ಪೊಲೀಸರು ಧರಣಿ ನಿರತರ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಏಕಾಏಕಿ ಎಲ್ಲಾ ಧರಣಿ ನಿರತರನ್ನು ಅರೆಸ್ಟ್ ಮಾಡಿ ಊರ್ಡಿಗೆರೆ ಪೊಲೀಸ್ ಉಪ ಠಾಣೆಗೆ ಕರೆದುಕೊಂಡು ಹೋಗಿ ಕೂರಿಸಿದ್ದಾರೆ.
ಧರಣಿಯನ್ನು ನಿಲ್ಲಿಸುವಂತೆ ಈಗಾಗಲೇ ಹಲವು ಬಾರಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಧರಣಿ ನಿರತರಿಗೆ ತಿಳಿಸಿತ್ತು. ಆದರೆ ನಮಗೆ ಹಕ್ಕು ಪತ್ರ ನೀಡುವವರೆಗೂ ನಾವು ಧರಣಿಯನ್ನು ಮುಂದುವರೆಸುತ್ತೇವೆ ಅಂತಾ ಹೋರಾಟಗಾರರು ಪಟ್ಟು ಹಿಡಿದಿದ್ದರು. ಆದರೆ ಇಂದು ಬೆಳಿಗ್ಗೆ ಏಕಾಏಕಿ ಧರಣಿ ನಿರತರನ್ನು ಧರಣಿ ಸ್ಥಳದಿಂದ ಪೊಲೀಸರು ಒಕ್ಕಲೆಬ್ಬಿಸಿದ್ದಾರೆ.
ಊರ್ಡಿಗೆರೆ ಪೋಲಿಸ್ ಉಪಠಾಣೆಯ ಮುಂಭಾಗದಲ್ಲಿಯೂ ಕೂಡ ಹೋರಾಟಗಾರರು ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶವನ್ನು ಹೊರಹಾಕಿದ್ದಾರೆ. ನಮ್ಮ ಭೂಮಿ ನಮ್ಮ ಹಕ್ಕು, ನಮಗೆ ಹಕ್ಕು ಪತ್ರ ಕೊಡಿ ಎಂದು ಘೋಷಣೆ ಕೂಗಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದರು. ಆದರೆ ಇಂದು ಏಕಾಏಕಿ ಬೆಳಿಗ್ಗೆ ಬಂದು ನಮ್ಮನ್ನು ಒಕ್ಕಲೆಬ್ಬಿಸಿದ್ದಾರೆ. ಸ್ಥಳದಲ್ಲಿ ಹಕ್ಕು ಪತ್ರ ನೀಡದಿದ್ದರೆ ಊರ್ಡಿಗೆರೆಯಿಂದ ತುಮಕೂರು ಜಿಲ್ಲಾಧಿಕಾರಿ ಕಚೇರಿಯವರೆಗೂ ಪಾದಯಾತ್ರೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಬೆಳಗ್ಗಿನಿಂದ ಊಟ, ತಿಂಡಿ, ನೀರನ್ನು ಕೂಡ ಮುಟ್ಟದೇ ಪ್ರತಿಭಟನೆ ಮುಂದುವರೆಸಿದ್ದಾರೆ.
ನಮಗೆ ಈ ರೀತಿ ಹಿಂಸೆ ಕೊಡುವುದನ್ನು ಬಿಟ್ಟು ನಮ್ಮಗೆ ಒಂದು ತೊಟ್ಟು ವಿಷ ಕೊಟ್ಟು ಬಿಡಿ ಎಂದು ಆಕ್ರೋಶ ಹೊರಹಾಕಿರುವ ಹೋರಾಟಗಾರರು, ನಮಗೆ ಏನೇ ಆದರೂ ತುಮಕೂರು ಡಿಸಿ, ಎಸ್‌ಪಿಯವರೇ ಕಾರಣ ಎಂದು ಸಿಟ್ಟು ಹೊರಹಾಕಿದ್ದಾರೆ. ಅದೇನೆ ಇರಲಿ ತಮ್ಮ ಹಕ್ಕನ್ನು ಕೇಳಲು ಬಂದ ಬಡಜನರನ್ನು ಜಿಲ್ಲಾಡಳಿತ ಹೀಗೆ ಒಕ್ಕಲೆಬ್ಬಿಸುವ ಕೆಲಸ ಮಾಡಿದ್ದು ಮಾತ್ರ ವಿಪರ್ಯಾಸ.