ತುಮಕೂರು:
ಕಲ್ಪತರು ನಾಡು ತುಮಕೂರಿನಲ್ಲಿ ಇಂದು ಮತ್ತೊಂದು ಭಯಾನಕ ಘಟನೆ ನಡೆದುಹೋಗಿದೆ. ಎಂಟು ತಿಂಗಳು ಗರ್ಭಿಣಿಯಾಗಿದ್ದ ಪತ್ನಿಯನ್ನು ಪಾಪಿ ಪತಿರಾಯನೇ ನೇಣು ಬಿಗಿದು ಕೊಲೆಗೈದಿರುವ ಪ್ರಕರಣ ಬೆಳಕಿಗೆ ಬಂದಿದೆ. ಅನುಮಾನದ ಪಿಶಾಚಿಯಾಗಿದ್ದ ಗಂಡ ಎಂಟು ವರ್ಷದ ಮಗನ ಎದುರೇ ಪತ್ನಿಯ ಬಾಯಲ್ಲಿ ಮಣ್ಣು ತುರುಕಿ ನೇಣಿಗೆ ಬಿಗಿದು ಹೆಂಡತಿಯನ್ನು ಸಾಯಿಸಿಬಿಟ್ಟಿದ್ದಾನೆ.
ಇವರಿಬ್ಬರು ಪ್ರೀತಿಸಿ ಮದುವೆಯಾದ ಜೋಡಿಗಳು, ಆದರೆ ಈಕೆಯ ಗಂಡನಿಗೆ ಹೆಂಡತಿ ಮೇಲೆ ಯಾವಾಗಲೂ ಅನುಮಾನದ ರೋಗ. ದೊಡ್ಡ ಅನುಮಾನದ ಪಿಶಾಚಿಯಾಗಿದ್ದ ಈತ ಕೊನೆಗೆ ಕಟ್ಟಿಕೊಂಡ ಹೆಂಡತಿಯನ್ನೇ ಹತ್ಯೆಗೈದಿದ್ದಾನೆ. ಇದು ತುಮಕೂರು ನಗರದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನಡೆದಿರುವ ಭಯಾನಕ ಮರ್ಡರ್. 30 ವರ್ಷದ ನಗ್ಮಾ ಎಂಬಾಕೆ ಮೃತ ದುರ್ದೈವಿ. ಸೈಯದ್ ಇರ್ಫಾನ್ ಎಂಬಾತನೇ ಈಕೆಯನ್ನು ಕೊಲೆಗೈದಿರುವ ಪಾಪಿ ಪತಿರಾಯ.
ನಗ್ಮಾ ಮತ್ತು ಸೈಯದ್ ಇರ್ಫಾನ್ ಇಬ್ಬರಿಗೂ ಇದು ಎರಡನೇ ಮದುವೆ. ನಗ್ಮಾಗೆ ಮೊದಲ ಪತಿಯಿಂದ ೮ ವರ್ಷದ ಮಗನಿದ್ದಾನೆ. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿಯೇ ಈ ಪಾಪಿ ಗಂಡ ಹಂಡತಿಗೆ ಕಿರುಕುಳ ನೀಡೋದಕ್ಕೆ ಶುರುಮಾಡಿದನಂತೆ. ಯಾರ ಬಳಿ ಮಾತನಾಡಿದ್ರೂ ಅನುಮಾನ, ಎಲ್ಲಿಗಾದರೂ ಹೋಗಿ ಬಂದರೂ ಡೌಟ್. ಹೀಗೆ ಸದಾ ಹೆಂಡತಿಯ ವಿರುದ್ಧ ಸಂಶಯ ಹೊರಹಾಕಿ ಕಿರುಕುಳ ನೀಡ್ತಿದ್ದನಂತೆ. ನಶಾಮುಕ್ತಿ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ ಈ ಸೈಯದ್ ಇರ್ಫಾನ್ ಹೆಂಡತಿಯ ಮೇಲೆ ಸದಾ ಹಲ್ಲೆ ಮಾಡ್ತಿದ್ದನಂತೆ. ಅದೇ ರೀತಿ ನಿನ್ನೆ ಕೂಡ ಇವರಿಬ್ಬರ ನಡುವೆ ಜಗಳ ನಡೆದಿದೆ. ಹೆಂಡತಿ ನಗ್ಮಾ ನಿನ್ನೆ ಫಂಕ್ಷನ್ಗೆ ಹೋಗಿ ರಾತ್ರಿ ೯ ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾಳೆ. ಇದನ್ನೇ ದೊಡ್ಡದು ಮಾಡಿರುವ ಪತಿರಾಯ ೮ ವರ್ಷದ ಮಗನ ಎದುರೇ ಹೆಂಡತಿಯ ಮೇಲೆ ಹಲ್ಲೆ ನಡೆಸಿದ್ದಾನಂತೆ. ಬಳಿಕ ಹೆಂಡತಿ ಕಿರುಚದಂತೆ ಬಾಯಲ್ಲಿ ಮಣ್ಣು ತುರುಕಿ, ಮನಬಂದಂತೆ ಥಳಿಸಿದ್ದಾನೆ. ಅದಾದ ಬಳಿಕ ಪತ್ನಿ ನಗ್ಮಾಗೆ ನೇಣು ಬಿಗಿದು ಕೊಲೆಗೈದಿದ್ದಾನೆ.
ಸದ್ಯ ನಗ್ಮಾ ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಶವಾಗಾರದ ಎದುರು ಆಕೆಯ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಅಷ್ಟೇ ಅಲ್ಲ, ಪಾಪಿ ಪತಿಯಿಂದಲೇ ನಗ್ಮಾ ಕೊಲೆಯಾಗಿದ್ದಾಳೆ ಅಂತಾ ನಗ್ಮಾ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಸದ್ಯ ಆರೋಪಿ ಸೈಯದ್ ಇರ್ಫಾನ್ ತಿಲಕ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಈ ಸಂಬಂಧ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಪೊಲೀಸರ ತನಿಖೆಯ ಬಳಿಕವಷ್ಟೇ ಪ್ರಕರಣದ ಬಗ್ಗೆ ಸಂಪೂರ್ಣ ವಿಚಾರ ಬೆಳಕಿಗೆ ಬರಬೇಕಿದೆ.