ಶಿರಾ:
ಶಿರಾ ತಾಲೂಕಿನಲ್ಲಿರೋ ವಸತಿ ಶಾಲೆಯಲ್ಲಿನ ದುಸ್ಥಿತಿ ಬಗ್ಗೆ ಪ್ರಜಾಶಕ್ತಿ ಎಳೆ ಎಳೆಯಾಗಿ ಬಿತ್ತರಿಸುತ್ತಿದ್ದ ಬೆನ್ನಲ್ಲೇ, ಹಾಸ್ಟೆಲ್‌ನಲ್ಲೋಂದು ದುರಂತ ಸಂಭವಿಸಿದೆ. ಹೌದು ಶಿರಾ ತಾಲೂಕಿನ ಲಕ್ಕನಹಳ್ಳಿ ಗ್ರಾಮದಲ್ಲಿರೋ ವಸತಿ ಶಾಲೆಯಲ್ಲಿ ನಿನ್ನೆ ಸಂಜೆ ಊಟ ಸೇವಿಸಿದ ಬಳಿಕ ಮಕ್ಕಳಲ್ಲಿ ಫುಡ್ ಪಾಯ್ಸನ್ ಆಗಿ ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ಕೂಡಲೇ ಮಕ್ಕಳನ್ನು ಲಕ್ಕನಹಳ್ಳಿ ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ.
ಲಕ್ಕನಹಳ್ಳಿ ಸರ್ಕಾರಿ ಬಾಲಕರ ವಸತಿ ಶಾಲೆಯಲ್ಲಿ ನಿನ್ನೆ ರಾತ್ರಿ 7:30ರ ಸುಮಾರಿಗೆ ಊಟ ಸೇವಿಸಿದ ಬಳಿಕ ಮೊದಲು ಅತಿಥಿ ಶಿಕ್ಷಕರಾಗಿರೋ ಜನಾರ್ದನ್ ಎಂಬುವವರಿಗೆ ಹೊಟ್ಟೆ ನೋವು, ತಲೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದೇ. ಕೂಡಲೇ ಅವರು ಲಕ್ಕನಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆಮೇಲೆ ಸುಮಾರು ಸಮಯದ ಬಳಿಕ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು, ವಾಂತಿ ಭೇದಿ ಕಾಣಿಸಿಕೊಂಡಿದೆ. ಕೂಡಲೇ ಮಕ್ಕಳನ್ನು ಲಕ್ಕನಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಶಿರಾದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅದೃಷ್ಟವಶಾತ್ ಮಕ್ಕಳು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇನ್ನು ಆಹಾರದಲ್ಲಿ ಉಂಟಾದ ವ್ಯತ್ಯಯದಿಂದಾಗಿ ಆರೋಗ್ಯ ಸಮಸ್ಯೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಭೇಟಿ ನೀಡಿದ THO ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ್ದಾರೆ.
ನಿನ್ನೆ ಈ ಘಟನೆ ನಡೆದ ವೇಳೆ ಹಾಸ್ಟೆಲ್‌ನಲ್ಲಿ ವಾರ್ಡನ್ ಇರಲಿಲ್ಲವಂತೆ, ಅಲ್ಲದೇ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಯ ಆಗಿದ್ದರೂ ಕೂಡ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈವರೆಗೂ ಭೇಟಿ ನೀಡಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಮಕ್ಕಳು ಅಸ್ವಸ್ಥರಾಗಲು ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕ್ತಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ದೌಡಾಯಿಸಿದ ಶಿರಾ ನಗರದ ಯುವ ಕಾಂಗ್ರೆಸ್ ಅಧ್ಯಕ್ಷ ಅಂಜನ್ ಮಕ್ಕಳ ಆರೋಗ್ಯವನ್ನು ವಿಚಾರಿಸಿ, ಧೈರ್ಯ ತುಂಬಿದರು. ಇನ್ನು ಕಳೆದ ಕೆಲ ದಿನಗಳಿಂದಲೂ ಪ್ರಜಾಶಕ್ತಿ ಟಿವಿ ಶಿರಾ ತಾಲೂಕಿನಲ್ಲಿರೋ ವಸತಿ ಶಾಲೆಗಳ ಬಗ್ಗೆ ರಿಯಾಲಿಟಿ ಚೆಕ್ ಮಾಡಿದ್ದು, ಬಹುತೇಕ ಹಾಸ್ಟೆಲ್‌ಗಳಲ್ಲಿ ಮೂಲ ಭೂತ ಸೌಕರ್ಯದ ಕೊರತೆ ಹಾಗೂ ಸ್ವಚ್ಚತೆ ಇಲ್ಲದಿರೋದು ಬಟಾಬಯಲಾಗಿದೆ. ಈ ಬೆನ್ನಲ್ಲೇ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಇಲಾಖೆ ತಲೆತಗ್ಗಿಸುವಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ವಸತಿ ನಿಲಯದಲ್ಲಿರೋ ಅವ್ಯವಸ್ಥೆಯನ್ನು ಸರಿಪಡಿಸಿ, ಮಕ್ಕಳ ಆರೋಗ್ಯವನ್ನು ಕಾಪಾಡಬೇಕಿದೆ.