ತಿಪಟೂರು : ಇತ್ತೀಚೆಗೆ ಬಹುತೇಕ ಎಲ್ಲಾ ಊರುಗಳಲ್ಲಿಯೂ ಈ ಬೀದಿನಾಯಿಗಳ ಹಾವಳಿ ಜಾಸ್ತಿಯಾಗ್ತಿದೆ. ರಕ್ಕಸರಂತೆ ವರ್ತಿಸುತ್ತಿರುವ ಬೀದಿನಾಯಿಗಳು ಬೀದಿಗಳಲ್ಲಿ ಆಟವಾಡುವ ಮಕ್ಕಳ ಮೇಲೆ ಭಯಂಕರವಾಗಿ ದಾಳಿ ನಡೆಸುತ್ತಿರುವ ಪ್ರಕರಣಗಳು ಅಲ್ಲಲ್ಲಿ ಬೆಳಕಿಗೆ ಬರ್ತಾನೆ ಇವೆ. ಇದೀಗ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿಯೂ ಇಂಥದ್ದೇ ಒಂದು ಭಯಾನಕ ಘಟನೆ ನಡೆದಿದ್ದು, ಬೀದಿಯಲ್ಲಿ ಆಟವಾಡುತ್ತಿದ್ದ ಆರು ವರ್ಷದ ಮಗುವಿನ ಮೇಲೆ ಬೀದಿನಾಯಿಗಳ ಹಿಂಡು ದಾಳಿಯನ್ನು ನಡೆಸಿ ಆ ಮಗುವಿನ ತಲೆಯನ್ನು ಹರಿದು, ಹೊಟ್ಟೆಯನ್ನು ಸೀಳಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ.
ತಿಪಟೂರು ತಾಲೂಕಿನ ಕಸಬಾ ಹೋಬಳಿಯ ಅಯ್ಯನಬಾವಿ ಬೋವಿ ಕಾಲೋನಿಯಲ್ಲಿ ನಡೆದಿರುವ ಘಟನೆಯಿದು. ಅಯ್ಯನಬಾವಿ ಗ್ರಾಮದ ನಿವಾಸಿ ಮಹಲಿಂಗಯ್ಯ ಅವರ ಮಗಳು 6 ವರ್ಷದ ನವ್ಯಾ ಬೀದಿನಾಯಿಗಳ ದಾಳಿಯಿಂದ ಸಾವಿಗೀಡಾದ ನತದೃಷ್ಟ ಮಗು. ನಿನ್ನೆ ಮಧ್ಯಾಹ್ನ 4 ಗಂಟೆ ಸಮಯದಲ್ಲಿ ಅಯ್ಯನಬಾವಿ ಗ್ರಾಮದ ತಮ್ಮ ಮನೆ ಮುಂದೆ ಆಟವಾಡುತ್ತಿದ್ದ ವೇಳೆ ಈ ಮಗುವಿನ ಮೇಲೆ ಬೀದಿನಾಯಿಗಳ ಹಿಂಡು ದಾಳಿ ನಡೆಸಿದೆ. ಮಗುವಿನ ಮೇಲೆ ಅಟ್ಯಾಕ್ ಮಾಡಿರುವ ಏಳೆಂಟು ರಕ್ಕಸ ನಾಯಿಗಳು ಮಗುವಿನ ತಲೆಯ ಚರ್ಮವನ್ನು ಸಂಪೂರ್ಣವಾಗಿ ಕಿತ್ತುಹಾಕಿ, ಹೊಟ್ಟೆಯ ಕರುಳು ಆಚೆ ಬರುವಂತೆ ಗಾಯಗೊಳಿಸಿವೆ. ಅಷ್ಟೇ ಅಲ್ಲ, ಮಗುವಿನ ಮುಖ ಹಾಗೂ ಕೈ. ಕಾಲು ತೊಡೆ ಭಾಗವನ್ನು ಕೂಡ ಕಿತ್ತು ತಿಂದುಹಾಕಿವೆ.
ಬೀದಿನಾಯಿಗಳ ದಾಳಿಗೊಳಗಾಗಿ ಚೀರಾಡುತ್ತಿದ್ದ ಮಗುವನ್ನು ಕಂಡ ಸಾರ್ವಜನಿಕರು ಕೂಡಲೇ ಓಡಿ ಹೋಗಿ ನಾಯಿಹಿಂಡುಗಳನ್ನು ಓಡಿಸಿ ಮಗುವನ್ನು ತಕ್ಷಣವೇ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹಾಸನ ಆಸ್ಪತ್ರೆಗೆ ಕೊಂಡೊಯ್ದು ಹೆಚ್ಚಿನ ಚಿಕಿತ್ಸೆಯನ್ನು ಕೂಡ ಕೊಡಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮಗು ನವ್ಯಾ ಸಾವನ್ನಪ್ಪಿದ್ದಾಳೆ.
ಇನ್ನು ತಾಲೂಕಿನಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದು, ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರೂ ಕೂಡ ತಾಲೂಕು ಆಡಳಿತ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ. ಎಪ್ರಿಲ್ ತಿಂಗಳಿನಲ್ಲಿಯೇ ತಾಲೂಕಿನಲ್ಲಿ ಸುಮಾರು 200 ಬೀದಿನಾಯಿ ಕಡಿತದ ಪ್ರಕರಣಗಳು ದಾಖಲಾಗಿದ್ದರೆ, ಮೇ ತಿಂಗಳಿನಲ್ಲಿ 150 ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನೇದಿನೇ ನಾಯಿ ಹಾವಳಿ ಜಾಸ್ತಿಯಾಗುತ್ತಿದ್ದರೂ ಮೌನ ವಹಿಸಿರುವ ಆಡಳಿತ ವ್ಯವಸ್ಥೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.