ಹಾಸನ : ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹೊಸ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್ ಕಟ್ಟಡದ ಗೋಡೆಯ ಒಂದು ಭಾಗ ಕುಸಿದು ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ. ತಕ್ಷಣ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಸಫಿಯಾ, ಫಯಿಮಾ ಭಾನು, ಶಹನಾಜ್ ಮತ್ತು ನಿಜಾರ್ ಎಂಬುವವರು ಗಾಯಗೊಂಡಿದ್ದು, ಇವರು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಹೋಟೆಲ್ ದೇವಾಲದಕೆರೆ ಗ್ರಾಮದ ಆಶೋಕಗೌಡ ಅವರಿಗೆ ಸೇರಿದಾಗಿದ್ದು, ನಿರಂತರ ಮಳೆಯಿಂದ ಶಿಥಿಲಗೊಂಡಿದ್ದ ಗೋಡೆಯ ಒಂದು ಭಾಗ ಏಕಾಏಕಿ ಕುಸಿದಿದ್ದು, ಹೋಟೆಲ್ ನಲ್ಲಿ ಕೆಲಸ ಮಾಡ್ತಿದ್ದ ನಾಲ್ವರು ಕಟ್ಟಡದಡಿ ಸಿಲುಕಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಸ್ಥಳೀಯರು ರಕ್ಷಿಸಿ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.