ತಿಪಟೂರು:
ಈ ಆನ್ ಲೈನ್ ಗೇಮ್ ಅನ್ನೋದು ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಎಲ್ಲರನ್ನೂ ಹಾದಿ ತಪ್ಪಿಸ್ತಾ ಇದೆ. ಕೆಲವು ಯುವಕರು ಈ ಆನ್‌ಲೈನ್ ಗೇಮ್‌ಗಳಿಂದ ಓದೋದು ಬರಿಯೋದನ್ನು ಬಿಟ್ಟು ಹಾಳಾಗ್ತಿದ್ರೆ, ಇನ್ನೂ ಕೆಲವರು ಆತ್ಮಹತ್ಯೆಗಳಿಗೆ ಶರಾಣಾಗುತ್ತಿದ್ದಾರೆ. ಇದೆಲ್ಲಕ್ಕಿಂತ ವಿಚಿತ್ರ ಅಂದರೆ ಕೆಲವರು ಈ ಆನ್ ಲೈನ್ ಗೇಮ್ ಗಳ ಗೀಳಿಗೆ ಬಿದ್ದು, ಅದಕ್ಕೆ ಹಣ ಹೊಂದಿಸೋಕಾಗಿ ಕೊನೆಗೆ ಕಳ್ಳತನ, ದರೋಡೆಗಳಿಗೆ ಇಳಿಯುತ್ತಿದ್ದಾರೆ. ಇಂತವರಿಂದ ಒಂಟಿ ಮಹಿಳೆಯರು ಓಡಾಡೋಕೆ ಭಯಪಡುವ ಸ್ಥಿತಿ ನಿರ್ಮಾಣ ಆಗಿದೆ. ಇಂಥಾ ಡೇಂಜರಸ್ ಚೈನ್ ಸ್ನ್ಯಾಚರ್ಸ್ ಗಳನ್ನು ತಿಪಟೂರು ಪೊಲೀಸರು ಬಂಧಿಸಿದ್ದಾರೆ.
ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಖದೀಮರನ್ನು ಬಂಧಿಸುವಲ್ಲಿ ತಿಪಟೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಜನವರಿ 28ರಂದು ತಿಪಟೂರು ನಗರದ ಕೆ.ಆರ್. ಬಡವಾಣೆಯಲ್ಲಿ ಅನುಸೂಯ ರಾಜ್ ಎಂಬ ಮಹಿಳೆ ದಿನಸಿ ಅಂಗಡಿಗೆ ಹೋಗುತ್ತಿರುವಾಗ, ಹಿಂದಿನಿಂದ ಡಿಸ್ಕವರಿ ಬೈಕ್ ನಲ್ಲಿ ಬಂದ ಇಬ್ಬರು ಆಸಾಮಿಗಳು ಮಹಿಳೆಯ ಕೊರಳಿನಲ್ಲಿದ್ದ ಸುಮಾರು 80 ಗ್ರಾಂ ತೂಕದ 4 ಲಕ್ಷ ಮೌಲ್ಯದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ದೂರು ದಾಖಲಿಸಿಕೊಂಡ ತಿಪಟೂರು ನಗರ ಪೊಲೀಸರು ತನಿಖೆಗೆ ಕೈಗೊಂಡು, ಪ್ರಕರಣ ದಾಖಲಾದ ಕೆಲವೇ ದಿನಗಳಲ್ಲಿ ಚಿಕ್ಕಮಗಳೂರು ನಗರ ಉಪ್ಪಳ್ಳಿ ಮೂಲದ 35 ವರ್ಷದ ಇರ್ಪಾನ್, ಚಿಕ್ಕಮಗಳೂರಿನ ಟಿಪ್ಪು ನಗರದ 23 ವರ್ಷದ ಅಸ್ಪಾನ್ ಹಾಗೂ ಹಾಸನ ಜಿಲ್ಲೆಯ ಬೇಲೂರು ಶರೀಫ್ ನನ್ನು ಬಂಧಿಸುವಲ್ಲಿ ತಿಪಟೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಆರೋಪಿಗಳು ಕಡೂರು ರೈಲ್ವೆ ಸ್ಟೇಷನ್ ಬಳಿ ಕಳ್ಳತನ ಮಾಡಿದ್ದ, ಮಾರುತಿ 800 ಕಾರು ಹಾಗೂ ಚಿನ್ನದ ಮಾಂಗಲ್ಯ ಸರ, ಕಳ್ಳತನ ಮಾಡಲು ಉಪಯೋಗಿಸಿದ್ದ ಡಿಸ್ಕವರಿ ಬೈಕನ್ನು ವಶಕ್ಕೆ ಪಡೆಯಲಾಗಿದೆ. ಈ ಮೂರು ಜನ ಆರೋಪಿಗಳು ಚಿತ್ರದುರ್ಗ ಜಿಲ್ಲೆ ಹಿರಿಯೂರು ಟೌನ್ ನಲ್ಲಿರುವ ವಾಸವಿ ಜ್ಯೂಯಲರ್ಸ್ ಚಿನ್ನಾಭರಣ ಅಂಗಡಿಯನ್ನು ದರೋಡೆ ಮಾಡಲು ಸ್ಕೆಚ್ ರೆಡಿ ಮಾಡಿಕೊಂಡಿದ್ದರು. ಇದಕ್ಕಾಗಿ ಒಂದು ಗ್ಯಾಸ್ ಸಿಲಿಂಡರ್, ಗ್ಯಾಸ್‌ಕಟ್ಟರ್ ಸಲಕರಣೆ, ಕಬ್ಬಿಣದ ಹಾರೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಕೂಡ ಜಪ್ತಿ ಮಾಡಲಾಗಿದೆ.
ಇನ್ನು ಈ ವೇಳೆ ಮತ್ತೊಂದು ಆತಂಕಕಾರಿ ವಿಚಾರವನ್ನು ಈ ಕಳ್ಳರು ಬಾಯಿಬಿಟ್ಟಿದ್ದಾರೆ. ಆನ್ ಲೈನ್ ಗೇಮ್ ಗಳಿಗೆ ಇವರೆಲ್ಲಾ ದಾಸರಾಗಿದ್ದಾರಂತೆ. ಆನ್‌ಲೈನ್ ಬೆಟ್ಟಿಂಗ್, ಗ್ಯಾಂಬ್ಲಿಂಗ್, ಗೇಮ್ ಗಳಿಗೆ ನಾವೆಲ್ಲಾ ಅಡಿಕ್ಟ್ ಆಗೋಗಿದ್ದಿವಿ. ನಮ್ಮ ಬಳಿ ದುಡ್ಡು ಖಾಲಿ ಆದಾಗ ಹೀಗೆಲ್ಲಾ ಮಾಡ್ತಿವಿ ಅಂತ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ಜತೆಗೆ ಈ ಆರೋಪಿಗಳಿಂದ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದ 5,40,000 ಮೌಲ್ಯದ ಕಾರು, ಬೈಕು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಗೇಮ್ ಅನ್ನೋ ಗೀಳು ಯುವಕರನ್ನು ಕಳ್ಳತನಕ್ಕೂ ಇಳಿಸುತ್ತಿರೋದು ಅತ್ಯಂತ ಗಂಭೀರ ವಿಚಾರವಾಗಿದ್ದು, ಈ ಬಗ್ಗೆ ಪೋಷಕರು ಗಮನಹರಿಸಬೇಕಿದೆ.