ತಿಪಟೂರು:
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಭಾರೀ ಕಳ್ಳತನದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೊಸೈಟಿಯ ಬೀಗ ಮುರಿದ ಖದೀಮರು ಲಕ್ಷ ಲಕ್ಷ ಹಣವನ್ನು ದೋಚಿರುವ ಘಟನೆ ನಡೆದಿದ್ದು, ಕಳ್ಳರ ಕರಾಮತ್ತಿಗೆ ಜನರು ಬೆಚ್ಚಿಬಿದ್ದಿದ್ದಾರೆ.
ತಿಪಟೂರು ತಾಲೂಕಿನ ಕಸಬಾ ಹೋಬಳಿಯ ರಂಗಾಪುರ ಗ್ರಾಮದಲ್ಲಿ ನಡೆದಿರುವ ಘಟನೆಯಿದು. ಸೊಸೈಟಿಯ ಬೀಗ ಮುರಿದ ಖದೀಮರು ಲಕ್ಷಾಂತರ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ರಂಗಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಈ ಕಳ್ಳತನ ನಡೆದಿದೆ. ಸಂಘದ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಹಣ ಮಾತ್ರವಲ್ಲದೇ ದಾಖಲೆಗಳನ್ನು ಕೂಡ ಕಳವು ಮಾಡಿದ್ದಾರೆ.
ನಿನ್ನೆ ಮಧ್ಯರಾತ್ರಿ 1.00 ರಿಂದ 2 ಗಂಟೆಯ ಸುಮಾರಿಗೆ ಕಳ್ಳತನ ನಡೆದಿದ್ದು, ಬಾಗಿಲನ್ನು ಗ್ಯಾಸ್ ಕಟ್ಟರ್ ನಿಂದ ಮುರಿದು ಬ್ಯಾಂಕ್ ಒಳಗೆ ನುಗ್ಗಿ ಸಿಸಿಟಿವಿಯ ಡಿವಿಆರ್, ಖಜಾನೆಯಲ್ಲಿದ್ದ ಒಂದು ಲಕ್ಷದ ಐವತ್ತು ಸಾವಿರ ರೂಪಾಯಿಗಳನ್ನು ತೆಗೆದುಕೊಂಡು ಬಳಿಕ ಖದೀಮರು ದಾಖಲೆಗಳ ಪುಸ್ತಕವನ್ನು ಚೆಲ್ಲಾಡಿ ಹೋಗಿದ್ದಾರೆ.
ಸ್ಥಳಕ್ಕೆ ಸದ್ಯ ತಿಪಟೂರು ಡಿವೈಎಸ್ಪಿ ವಿನಾಯಕ ಶೆಟ್ಟಿಗೇರಿ, ಗ್ರಾಮಾಂತರ ವೃತ್ತ ನಿರೀಕ್ಷಕರಾದ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರಿಗಾಗಿ ಪೋಲಿಸರು ಬಲೆಬೀಸಿದ್ದಾರೆ.