ತಿಪಟೂರು:
ತುಮಕೂರು ಜಿಲ್ಲೆ ತಿಪಟೂರು ಹೇಳಿ ಕೇಳಿ ಕೊಬ್ಬರಿಗೆ ಫುಲ್ ಫೇಮಸ್. ತೆಂಗಿನ ಕಾಯಿಯಿಂದ ಹಲವು ಉತ್ಪನ್ನಗಳಿಗಾಗಿ ಕಾರ್ಖಾನೆಗಳು ಶುರುವಾಗಿವೆ. ಆದರೆ ಈ ಕಾರ್ಖಾನೆಗಳಿಂದಲೇ ರೈತರಿಗೆ, ಜನ ಸಾಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಈ ಕಾರ್ಖಾನೆಗಳಿಂದ ಜನ ಸಾಮಾನ್ಯರಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು. ಕಾರ್ಖಾನೆ ಮಾಲೀಕರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಗೆದ್ಲೇಹಳ್ಳಿ ಗ್ರಾಮದ ಸರ್ವೇ ನಂಬರ್ 32ರ ವ್ಯಾಪ್ತಿಯಲ್ಲಿ ಸುಮಾರು 12 ತೆಂಗಿನ ಕಾಯಿ ಫ್ಯಾಕ್ಟರಿ ಇದ್ದು, ಫ್ಯಾಕ್ಟರಿಯಿಂದ ಬರುವ ಕಲುಷಿತ ನೀರನ್ನು ಫ್ಯಾಕ್ಟರಿಯ ದಂಡೆಯಲ್ಲಿರೋ ಹಳ್ಳಕ್ಕೆ ಹರಿಸಲಾಗ್ತಿದೆ. ಹಳ್ಳದಿಂದ ಕೆರೆಗೆ ಕಲುಷಿತ ನೀರು ಹರಿಯುತ್ತಿದ್ದು, ಇದರಿಂದ ಕೆರೆಯ ನೀರು ಕಲುಷಿತವಾಗ್ತಿದೆ. ಇದರಿಂದ ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗ್ತಿದ್ದು ಗ್ರಾಮಸ್ಥರ ಆಕ್ರೋಶದ ಕಟ್ಟೆ ಹೊಡೆದಿದೆ. ಇನ್ನು ಹಳ್ಳದ ಪಕ್ಕದಲ್ಲಿಯೇ ಜಲಜೀವನ್ ಮಿಷನ್ ನಡಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದು, ಹೊಸದಾಗಿ ಬೋರ್ವೆಲ್ನನ್ನು ಕೂಡ ಕೊರೆಸಲಾಗಿದೆ. ಆದರೆ ಬೋರ್ಗೆ ಮೋಟರ್ ಬಿಟ್ಟು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡಿದ್ರೆ ಆ ನೀರು ಕಲುಷಿವಾಗಿದ್ದು ಗ್ರಾಮಸ್ಥರಲ್ಲಿ ರೋಗ ಹರಡುವ ಆತಂಕ ಹೆಚ್ಚಾಗಿದೆ.
ಕಾರ್ಖಾನೆಗಳು ಬಿಡುವ ಕಲುಷಿತ ನೀರಿನಿಂದ ಹತ್ತು ಹಲವು ಸಮಸ್ಯೆ ಆಗ್ತಿದೆ ಎಂದು ಕಾರ್ಖಾನೆ ಮಾಲೀಕರನ್ನು ಗ್ರಾಮಸ್ಥರು ಪ್ರಶ್ನೆ ಮಾಡಿದರೆ, ಗ್ರಾಮಸ್ಥರಿಗೆ ಧಮ್ಕಿ ಹಾಕಿ ಕಳುಹಿಸುತ್ತಿದ್ದಾರಂತೆ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನ ಆಗ್ತಾ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.