ಬಾಗಲಕೋಟೆ :
ಬೈಕ್ ನಲ್ಲಿ ಓವರ್ ಟೇಕ್ ಮಾಡಲು ಹೋಗಿ ಕ್ಯಾಂಟರ್ ಅಡಿ ಮೂವರು ಬಾಲಕರು ಬಿದ್ದು ಭೀಕರ ಅಪಘಾತ ಸಂಭವಿಸಿದ್ದು, ಮೂವರು ಬಾಲಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬೈಪಾಸ್ ನಲ್ಲಿ ನಡೆದಿದೆ. ಬಾಗಲಕೋಟೆ ತಾಲೂಕಿನ ಮುರನಾಳ ಗ್ರಾಮದ ನಿವಾಸಿಗಳಾದ ಸಿದ್ದು ರಾಜು ಗಣಿ (16), ಸಂತೋಷ ಕೂಡಗಿ (16) ಮತ್ತು ಕಾಮಣ್ಣ ಕುಪಲಿ (16) ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ.
ಊರಲ್ಲಿ ಹನುಮ ಜಯಂತಿ ಹಿನ್ನಲೆ ಡಿಜೆ ಮೆರವಣಿಗೆ ಆಯೋಜಿಸಿದ್ದು, ಮೆರವಣಿಗೆಯನ್ನು ನೋಡಲು ಮೂವರು ಬಾಲಕರು ಬೈಕ್ನಲ್ಲಿ ತೆರಳುತ್ತಿದ್ದರು. ಎಡಗಡೆಯಿಂದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ರಸ್ತೆ ಬದಿಯಲ್ಲಿ ಪಾದಚಾರಿಗೆ ಹೋಗಿ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಬೈಕ್ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದ ಬಾಲಕರ ಮೇಲೆ ಗದ್ದನಕೇರಿ ಕ್ರಾಸ್ನಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಕ್ಯಾಂಟರ್ ವಾಹನ ಹರಿದು ಬಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇನ್ನು ಬೈಕ್ ನಲ್ಲಿ ತೆರಳುತ್ತಿದ್ದ ಬಾಲಕರು ಹೆಲ್ಮೆಟ್ ಧರಿಸಿರಲಿಲ್ಲ ಅಲ್ದೇ ತ್ರಿಬಲ್ ರೈಡಿಂಗ್ ಹೊರಟ್ಟಿದ್ದರು. ಓವರ್ ಟೇಕ್ ಮಾಡಲು ಹೋಗಿ ಬಾಲಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಎಸ್ಪಿ ಅಮರನಾಥ್ ರೆಡ್ಡಿ ಭೇಟಿ ನೀಡಿ, ಪರಿಶೀಲಿನೆ ನಡೆಸಿದ್ದು, ಘಟನೆಯ ಕುರಿತು ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.