ದೇವನಹಳ್ಳಿ:
ಕರ್ನಾಟಕದ ಶ್ರೀಮಂತ ಗ್ರಾಮ ಪಂಚಾಯ್ತಿ ಎಂದೇ ಖ್ಯಾತಿ ಪಡೆದಿರುವ ದೇವನಹಳ್ಳಿಯ ಅಣ್ಣೇಶ್ವರ ಗ್ರಾಮ ಪಂಚಾಯ್ತಿಯಲ್ಲಿ ದಲಿತರಿಗೆ ನೆರವಿಲ್ಲದಂತಾಗಿದೆ. ಹೌದು ಈ ಗ್ರಾಮ ಪಂಚಾಯ್ತಿಯ ವ್ಯಾಪ್ತಿಯಲ್ಲಿ ವಾಸಿಸುವ ಬಡವರು, ದಲಿತರಿಗೆ ನಿವೇಶನ ಹಾಗೂ ಮೂಲಭೂತ ಸೌಕರ್ಯಗಳಿಲ್ಲದೆ ನಿವಾಸಿಗಳು ಪರದಾಡ್ತಾ ಇದ್ದು, ಶೌಚಾಲಯಗಳೂ ಇಲ್ಲದೇ ಮಹಿಳೆಯರು ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಮಹಿಳೆಯರು ಗ್ರಾಮ ಪಂಚಾಯ್ತಿ ವಿರುದ್ದ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಹೇಳಿಕೊಳ್ಳೋದಕ್ಕೆ ಇದು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಕ್ಕದಲ್ಲೇ ಇರೋ ಗ್ರಾಮ. ಆದ್ರೆ ಕುಗ್ರಾಮಕ್ಕಿಂತಲೂ ಕಡೆಯಾಗಿದೆ ಈ ಗ್ರಾಮ ಪಂಚಾಯ್ತಿಯ ಪರಿಸ್ಥಿತಿ. ಈ ಗ್ರಾಮದ ಅದೇಷ್ಟೋ ಕುಟುಂಬಗಳಿಗೆ ನಿವೇಶನವಿಲ್ಲ. ಕೇಳಿದರೆ ಕೊಡ್ತೀವಿ ಅಂತಾ ಹೇಳುತ್ತಾರೆ. ಆದರೆ ಕೊಡುವವರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇರೋ ಬಡವರು, ದಲಿತರಿಗೆ ಮೂಲಭೂತ ಸೌಕರ್ಯಗಳಿಲ್ಲದೇ ಜನರು ಒಡಾಡುತ್ತಿದ್ದಾರೆ. ಆದರೆ ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು ಅನ್ನೋ ರೀತಿ ಗ್ರಾಮ ಪಂಚಾಯ್ತಿ ಆಡಳಿತಕ್ಕೆ ಮಾತ್ರ ಭವ್ಯ ಬಂಗಲೆ ನಿರ್ಮಾಣವಾಗುತ್ತಿದೆ.
ನಮ್ಮೂರಿನಲ್ಲಿ ಒಂದು ಒಳ್ಳೆ ಅಂಬೇಡ್ಕರ್ ಭವನ ಇಲ್ಲ. ಚುನಾವಣೆ ಬಂದಾಗ ಮತಕ್ಕೆ ಬೆಲೆ ಕಟ್ಟುತ್ತಾರೆ. ನಮ್ಮನ್ನು ವಂಚನೆಯ ಹಾದಿಗೆ ದೂಡುತ್ತಾರೆ. ನಮಗೆ ಸ್ನಾನ ಮಾಡೋದಕ್ಕೂ ಒಂದು ಸೂರಿಲ್ಲ. ನಿತ್ಯಕರ್ಮ ಮಾಡೋದಕ್ಕೂ ಜಾಗವಿಲ್ಲ. ವಿಮಾನ ನಿಲ್ದಾಣ ಕಾಂಪೌಂಡ್ ನಲ್ಲಿ ಕಾಮಗಾರಿಗಳು ನಡೆಯುತ್ತಿರುವುದರಿಂದ ಅಲ್ಲಿಯೂ ಜಾಗವಿಲ್ಲದೆ ಪರದಾಡುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಸುಮಾರು 20-25 ವರ್ಷಗಳಾದರೂ ಪಂಚಾಯ್ತಿಯಿಂದ ಅನುದಾನ ಮತ್ತು ಮನೆ ನಿವೇಶನಗಳು ಇಲ್ಲ. ಚನ್ನಾಗಿ ಇರೋ ರಸ್ತೆಗಳನ್ನ ಹಾಳುಮಾಡೋದು ಮತ್ತೆ ಬಿಲ್ ಮಾಡಕೊಳ್ಳೋದು ಈ ಪಂಚಾಯತಿ ಕೆಲಸವಾಗಿಬಿಟ್ಟಿದೆ. ಹಲವು ವರ್ಷಗಳು ಕಳೆದರೂ ದಲಿತ ಕಾಲೋನಿಗಳಿಗೆ ಶೌಚಾಲಯ ಭಾಗ್ಯವಿಲ್ಲ. ಹಲವು ಬಾರಿ ಗ್ರಾಮ ಪಂಚಾಯತಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಅಣ್ಣೇಶ್ವರ ಗ್ರಾಮ ಪಂಚಾಯಿತಿ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ.