ಚಿಕ್ಕಬಳ್ಳಾಪುರ:
ಯಾವುದೇ ಸರ್ಕಾರ ಬರಲಿ ಸರ್ಕಾರಿ ಶಾಲೆಯನ್ನ ಉಳಿಸಿ, ಸರ್ಕಾರಿ ಶಾಲೆಯನ್ನ ಬೆಳೆಸಿ ಅನ್ನೋ ಮಾತುಗಳನ್ನ ಮಾತ್ರ ಹೇಳುತ್ತಲೇ ಇರುತ್ತಾರೆ. ಆದರೆ ಇಂದಿಗೂ ಎಷ್ಟೋ ಸರ್ಕಾರಿ ಶಾಲೆಗಳ ಪರಿಸ್ಥಿತಿ ಮಾತ್ರ ಬದಲಾಗ್ತಲೇ ಇಲ್ಲ. ರಾಜ್ಯದಲ್ಲಿ ಸಾವಿರಾರು ಶಾಲೆಗಳ ಕಟ್ಟಡಗಳು ಈಗಲೋ, ಆಗಲೋ ಬೀಳುವ ಸ್ಥಿತಿಯಲ್ಲಿದ್ದು, ತರಗತಿ ನಡೆಯುತ್ತಿದ್ದಾಗಲೇ ಶಾಲೆಯ ಮೇಲ್ಛಾವಣಿ ಕುಸಿದು 40ಕ್ಕೂ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಗ್ರಾಮದಲ್ಲಿ ನಡೆದಿದೆ.
ಚಿಕ್ಕಬಳ್ಳಾಪರ ಜಿಲ್ಲೆಯ ಚೇಳೂರು ಗ್ರಾಮದಲ್ಲಿರುವ ಶಾಲೆಯ ಕಟ್ಟಡಗಳನ್ನ ಸುಮಾರು ೧೬ ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿತ್ತು. ಆದ್ರೆ ಗುತ್ತಿಗೆದಾರರ ಕಳಪೆ ಕಾಮಗಾರಿಯಿಂದಾಗಿ ಈ ಶಾಲೆಯ ಕಟ್ಟಡ ಆಗಲೇ ಶಿಥಿಲಗೊಂಡುಬಿಟ್ಟಿತ್ತು. ಆದರೂ ಕೂಡ ಸಂಬಂಧಪಟ್ಟವರು ಈ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಶಿಥಿಲಗೊಂಡಿದ್ದ ಕಟ್ಟಡಗಳಲ್ಲಿಯೇ ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ನಡೆಯುತ್ತಿತ್ತು. ಆದ್ರೆ ಇದೀಗ ತರಗತಿ ನಡೆಯುತ್ತಿದ್ದಾಗಲೇ ಶಾಲೆಯ ಮೇಲ್ಛಾವಣಿ ಕುಸಿದುಬಿದ್ದಿದ್ದು, ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ವಲ್ಪದರಲ್ಲಿಯೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೀಗಾಗಿ ಸ್ವಲ್ಪದರಲ್ಲಿಯೇ ಮಹಾದುರಂತವೊಂದು ತಪ್ಪಿದಂತಾಗಿದೆ.
ಸದ್ಯ ಮೇಲ್ಛಾವಣಿ ಕುಸಿದು ಬಿದ್ದಿರೋದ್ರಿಂದ ಶಿಕ್ಷಕರು ಈ ಪುಟಾಣಿ ಮಕ್ಕಳಿಗೆ ಶಾಲೆಯ ಹೊರಗಡೆಯೇ ಕೂರಿಸಿ ಪಾಠ ಮಾಡುತ್ತಿದ್ದಾರೆ. ಹೀಗಾಗಿ ತಕ್ಷಣವೇ ಶಿಕ್ಷಣ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ, ವಿದ್ಯಾರ್ಥಿಗಳಿಗೆ ಪಾಠ ಕೇಳಲು ತಾತ್ಕಾಲಿಕ ವ್ಯವಸ್ಥೆಯನ್ನಾದ್ರೂ ಮಾಡಿಕೊಡಬೇಕಿದೆ.