ಗುಬ್ಬಿ:
ಕೆರೆಯಲ್ಲಿ ಈಜಲು ಹೋದಂತಹ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಎನ್. ಮತ್ತಿಘಟ್ಟ ಗ್ರಾಮದ ಕೆರೆಯಲ್ಲಿ ನಡೆದಿದೆ. ಮತ್ತಿಘಟ್ಟ ಗ್ರಾಮದ ನಿವಾಸಿ ಜಯರಾಂ (40) ಮೃತ ದುರ್ದೈವಿಯಾಗಿದ್ದಾರೆ.
ಬಿಸಿಲು ಹೆಚ್ಚಿದ್ದ ಪರಿಣಾಮ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಜಯರಾಂ, ನೀರಿನಲ್ಲಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ರು. ನೀರಿನಲ್ಲಿ ಮುಳುಗಿರುವ ಶಂಕೆ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕದಳ ಸಿಬ್ಬಂದಿ ಮೃತದೇಹ ಪತ್ತೆಗೆ ತೀವ್ರ ಶೋಧಕಾರ್ಯ ನಡೆಸಿದ್ದಾರೆ. ಆದರೆ 17 ಗಂಟೆಗಳ ಸತತ ಕಾರ್ಯಾಚರಣೆ ನಂತರ ಕೊನೆಗೂ ಜಯರಾಂ ಮೃತದೇಹ ಪತ್ತೆಯಾಗಿದೆ.
ಇನ್ನು ವಿಷಯ ತಿಳಿದು ಗುಬ್ಬಿ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದು, ಅಗ್ನಿಶಾಮಕದಳ ಹಾಗೂ ಮುಳುಗು ತಜ್ಞರ ನಿರಂತರ ಶೋಧ ನಡೆಸಿ ಮೃತದೇಹ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.