ಶಿರಾ:
ಪ್ರಜಾಶಕ್ತಿ ಮಾಧ್ಯಮದ ನಮ್ಮ ನಡೆ ನಿಮ್ಮೂರ ಕಡೆ ಅಭಿಯಾನ ಮುಂದುವರೆದಿದ್ದು, ಈ ವಾರ ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಪ್ರಯಾಣ ಮುಂದುವರೆಸಿದೆ. ಶಿರಾ ತಾಲೂಕಿನ ಬಸರಿಹಳ್ಳಿ ಪಾಳ್ಯ ಗ್ರಾಮದ ಹಳ್ಳಿಗಳಲ್ಲಿರೋ ಸಮಸ್ಯೆಗಳ ಮೇಲೆ ನಿಮ್ಮ ಪ್ರಜಾಶಕ್ತಿಯು ಬೆಳಕು ಚೆಲ್ಲಿದ್ದು, ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡುತ್ತಿದೆ.
ಬಸರಿಹಳ್ಳಿ ಪಾಳ್ಯ ಶಿರಾ ತಾಲೂಕಿನ ಸೀಬಿ ಗ್ರಾಮ ಪಂಚಾಯಿತಿಗೆ ಸೇರಿದ್ದು, ಈ ಗ್ರಾಮದ ಜನರು ಮೂಲಭೂತ ಸೌಕರ್ಯವನ್ನೇ ನೋಡಿಲ್ಲವಂತೆ. ಈ ಗ್ರಾಮದಲ್ಲಿ ಸುಮಾರು 50 ರಿಂದ 60 ಮನೆಗಳಿದ್ದು ಇವರಿಗೆ ರಸ್ತೆ ಸಂಪರ್ಕವೇ ಇಲ್ಲವಾಗಿದೆ. ಇದರಿಂದ ನಿತ್ಯ ಓಡಾಡಲು ಗ್ರಾಮಸ್ಥರು ಪರದಾಡುವಂತಾಗಿದೆ. ರಸ್ತೆಯೂ ಇಲ್ಲದಿರುವುದರಿಂದ ಈ ಗ್ರಾಮದಲ್ಲಿ ಬಸ್ಗಳನ್ನು ಸಹ ನೋಡಿಲ್ಲವಂತೆ.ಗ್ರಾಮದ ರಸ್ತೆ ಮಣ್ಣು ರಸ್ತೆಯಾಗಿದ್ದು ಮಳೆ ಬಂದರೆ ಕೆಸರು ಗದ್ದೆ ಆಗುತ್ತೆ. ಇನ್ನು ಬೇಸಿಗೆ ಬಂದರೆ ಸಂಪೂರ್ಣ ಧೂಳುಮಯವಾಗಲಿದೆ. ಹಳ್ಳ- ಕೊಳ್ಳಗಳ ರಸ್ತೆಯಲ್ಲಿ ಸವಾರರು ಎದ್ದು, ಬಿದ್ದು ಹೋಗುವಂತಹ ಪರಿಸ್ಥಿತಿ ಇದೆ.
ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಹೋಗಲು ಕೂಡ ರೋಗಿಗಳು ಸಂಕಷ್ಟ ಪಡುವಂತಾಗಿದೆ. ಅಲ್ಲದೇ ಗರ್ಭೀಣಿಯರು ಈ ರಸ್ತೆಯಲ್ಲಿ ಹೇಗೆ ಹೋಗ್ತಾರೆ ಅಂತಾ ಗ್ರಾಮಸ್ಥರು ಪ್ರಶ್ನೆ ಮಾಡ್ತಿದ್ದಾರೆ. ಜೊತೆಗೆ ಇಲ್ಲಿನ ಮಕ್ಕಳು ಶಾಲಾ- ಕಾಲೇಜಿಗೆ ಹೋಗಬೇಕಾದರೆ ನಡೆದುಕೊಂಡೇ ಹೋಗುವ ಅನಿವಾರ್ಯತೆ ಇದೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ಶಾಸಕರು ಗಮನ ಹರಿಸುತ್ತಿಲ್ಲ ಎಂದು ಇಲ್ಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಈ ಗ್ರಾಮದಲ್ಲಿ ಸರ್ಕಾರಿ ಶಾಲೆಯಿದ್ದು ಇಬ್ಬರು ಮಕ್ಕಳು ಮಾತ್ರ ಇದ್ದರು. ಶಾಲೆಗಾಗಿ ಗ್ರಾಮದ ವೃದ್ಧೆಯೊಬ್ಬರು ಮನೆಯನ್ನು ಕೂಡ ಬಿಟ್ಟು ಕೊಟ್ಟಿದ್ದರು. ಆದರೆ ಈ ಗ್ರಾಮದಲ್ಲಿರೋ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಎರಡನ್ನೂ ಮುಚ್ಚಲಾಗಿದೆ. ಹೀಗಾಗಿ ಇಲ್ಲಿನ ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತಿದ್ದಾರಂತೆ. ಈ ಗ್ರಾಮದಲ್ಲಿ ಶಾಲೆಯೂ ಇಲ್ಲ, ರಸ್ತೆಯೂ ಇಲ್ಲ ಇದರಿಂದ ಜನರು ತಮ್ಮ ಮೂಲಭೂತ ಸೌಕರ್ಯಕ್ಕಾಗಿ ಅಲೆದಾಡುವಂತ ಸ್ಥಿತಿ ಇದೆ. ಹೀಗಿದ್ದರು ಕೂಡ ಯಾವೊಬ್ಬ ಅಧಿಕಾರಿಯೂ ಕೂಡ ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಶಿರಾ ತಾಲೂಕಿನ ಬಸರಿಹಳ್ಳಿ ಪಾಳ್ಯಕ್ಕೆ ರಸ್ತೆ ಸಂಪರ್ಕ ಕಲ್ಪಿಸಿ, ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕಿದೆ.