ತುಮಕೂರು:
ಇಷ್ಟು ದಿನ ಬೀದಿನಾಯಿಗಳು ಮತ್ತು ಹಂದಿಗಳ ಕಾಟದಿಂದ ಬೇಸತ್ತಿದ್ದ ತುಮಕೂರಿಗರಿಗೆ ಇದೀಗ ಕೋತಿಯ ಕಾಟವೂ ಶುರುವಾಗಿದೆ. ನಗರದ ಮರಳೂರು ದಿಣ್ಣೆಯ ಐದು, ಆರು ಮತ್ತು ಹನ್ನೊಂದನೇ ಕ್ರಾಸ್‌ನಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ಇಲ್ಲಿನ ಜನರು ಮನೆಯಿಂದ ಆಚೆ ಬರೋದಕ್ಕೆ ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.
ಮರಳೂರು ದಿಣ್ಣೆಯಲ್ಲಿ ಇತ್ತೀಚೆಗೆ ಕೋತಿಗಳ ಕಾಟ ಹೆಚ್ಚಾಗಿದ್ದು, ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿವೆಯಂತೆ. ಮೈಕೈಗಳನ್ನ ಪರಚಿ ಗಾಯ ಮಾಡುತ್ತಿವೆಯಂತೆ. ಇನ್ನು ಹೀಗೆ ಕೋತಿಯಿಂದ ದಾಳಿಗೆ ಒಳಗಾಗುತ್ತಿರುವವರಲ್ಲಿ ವಯೋವೃದ್ಧರೇ ಹೆಚ್ಚು. ೧೫ರಿಂದ ೨೦ ಹೊಲಿಗೆಗಳನ್ನ ಹಾಕುವ ರೀತಿ ಗಾಯಗಳನ್ನ ಮಾಡಿವೆಯಂತೆ.
ಕೋತಿ ಕಾಟಕ್ಕೆ ಹೈರಾಣಾದ ಜನರು ಪ್ರಜಾಶಕ್ತಿ ಟಿವಿಯೊಂದಿಗೆ ತಮ್ಮ ಆತಂಕವನ್ನ ತೋಡಿಕೊಂಡಿದ್ದಾರೆ. ಏರಿಯಾದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದೆ. ನಾವು ಆಚೆ ಬರೋದಕ್ಕೂ ಕೂಡ ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂಡು ಹಿಂಬರುವ ೧೦-೨೦ ಕೋತಿಗಳು ಸುಮ್ಮನಿದ್ದರೂ ಕೂಡ ಏಕಾಏಕಿ ಮೈಮೇಲೆ ಎಗರಿ ಮೈಕೈ ಪರಚುತ್ತಿವೆ. ಆದಷ್ಟು ಬೇಗ ಈ ಕೋತಿಗಳನ್ನ ಹಿಡಿದು ಕಾಡಿಗೆ ಬಿಟ್ಟು, ಕೋತಿಗಳ ದಾಳಿಯಿಂದ ನಮ್ಮನ್ನ ತಪ್ಪಿಸಿ ಅಂತಾ ಜನರು ಅಳಲು ತೋಡಿಕೊಂಡಿದ್ದಾರೆ.
ಇನ್ನು ಕೋತಿಗಳ ದಾಳಿಗಳಿಂದ ಆಗಿರುವ ಗಾಯಗಳ ಫೋಟೋವನ್ನ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಕಳಿಸಿದ್ದಾರಂತೆ. ಆದರೂ ಅವರು ಸ್ಥಳಕ್ಕೆ ಬಂದು ದಾಳಿಗೆ ಒಳಗಾದವರಿಗೆ ಕನಿಷ್ಠ ಆರೋಗ್ಯ ವಿಚಾರಿಸುವ ಕೆಲಸವನ್ನೂ ಮಾಡಿಲ್ವಂತೆ. ಈ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅರಣ್ಯ ಇಲಾಖೆಯವರು ಕೋತಿಗಳನ್ನ ಸೆರೆಹಿಡಿದು ಕಾಡಿಗೆ ಬಿಡಬೇಕು ಅಂತಾ ಆಗ್ರಹಿಸಿದ್ದಾರೆ.
ಅದೇನೆ ಇರಲಿ.. ಇಷ್ಟು ದಿನ ಬೇರೆ ಬೇರೆ ಕಾಡುಪ್ರಾಣಿಗಳ ದಾಳಿಯ ಬಗ್ಗೆ ಕೇಳಿದ್ದೆವು. ಆದರೆ ಇದೀಗ ತುಮಕೂರು ನಗರದಲ್ಲಿ ಕೋತಿಗಳ ದಾಳಿಯಿಂದ ಜನರು ಕಂಗಾಲಾಗಿದ್ದಾರೆ. ಹೀಗಾಗಿ ಸಂಬಂಧಪಟ್ಟ ಇಲಾಖೆಯವ್ರು ಕೋತಿಗಳ ಕಾಟದಿಂದ ಮುಕ್ತಿಕೊಡಿಸುವ ಕೆಲಸ ಮಾಡ್ಬೇಕಿದೆ.